10 ನಿಮಿಷದ ಡೆಲಿವರಿ ಆಯ್ಕೆ ರದ್ದುಗೊಳಿಸಿ; ಗಿಗ್ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

ನಾಳೆಯೇ ಹೊಸ ವರ್ಷ. ಇಂದು ಸಂಜೆಯಿಂದ ಕೇಕ್, ಸಿಹಿತಿಂಡಿಗಳು ಮುಂತಾದ ವಸ್ತುಗಳನ್ನು ಖರೀದಿಸಲು ಮಹಾನಗರದಲ್ಲಿ ಜನ ಮುಗಿಬಿದ್ದಿರುತ್ತಾರೆ. ಟ್ರಾಫಿಕ್ ಸಮಸ್ಯೆಯಿಂದಾಗಿ ಬಹುತೇಕ ಜನರು ಆನ್​ಲೈನ್ ಡೆಲಿವರಿಯ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಇದರ ನಡುವೆ ಸ್ವಿಗ್ಗಿ, ಜೊಮ್ಯಾಟೋ ಮುಂತಾದ ಆನ್​ಲೈನ್ ಡೆಲಿವರಿ ಏಜೆಂಟ್​​ಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆನ್​ಲೈನ್ ಪ್ಲಾಟ್​​ಫಾರ್ಮ್​ಗಳ ನಡುವಿನ ಪೈಪೋಟಿಯಿಂದಾಗಿ 10 ನಿಮಿಷದಲ್ಲಿ ಡೆಲಿವರಿ ಎಂಬಿತ್ಯಾದಿ ಆಯ್ಕೆಗಳನ್ನು ಪರಿಚಯಿಸಲಾಗಿದೆ. ಇದನ್ನು ಹಿಂಪಡೆಯಬೇಕೆಂದು ಗಿಗ್ ಕಾರ್ಮಿಕರು ಒತ್ತಾಯಿಸಿದ್ದಾರೆ.

10 ನಿಮಿಷದ ಡೆಲಿವರಿ ಆಯ್ಕೆ ರದ್ದುಗೊಳಿಸಿ; ಗಿಗ್ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ
Gig Workers Protest

Updated on: Dec 31, 2025 | 5:48 PM

ನವದೆಹಲಿ, ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನವಾದ ಇಂದು ಡೆಲಿವರಿ ಏಜೆಂಟ್​​ಗಳು ಮುಷ್ಕರ ನಡೆಸುತ್ತಿದ್ದಾರೆ. ದೇಶಾದ್ಯಂತ ಮುಷ್ಕರದ ನಡುವೆ ಸ್ವಿಗ್ಗಿ (Swiggy), ಜೊಮಾಟೊ ವಿತರಣಾ ಪ್ರೋತ್ಸಾಹವನ್ನು ಹೆಚ್ಚಿಸಿವೆ. ಫುಡ್, ದಿನಸಿ ಮುಂತಾದ ವಿತರಣಾ ಅಪ್ಲಿಕೇಶನ್‌ಗಳ ಗಿಗ್ ಕಾರ್ಮಿಕರು ಇಂದು ದೇಶಾದ್ಯಂತ ಮುಷ್ಕರ ಘೋಷಿಸಿದ್ದಾರೆ. “10 ನಿಮಿಷದ ಡೆಲಿವರಿ ಆಯ್ಕೆಯನ್ನು ತೆಗೆದುಹಾಕಿ” ಎಂದು ಅವರು ಒತ್ತಾಯಿಸಿದ್ದಾರೆ.

ಕಡಿಮೆ ವೇತನ, ಅಸುರಕ್ಷಿತ ಪರಿಸ್ಥಿತಿಗಳು ಮತ್ತು ಕಳಪೆ ಕೆಲಸದ ಭದ್ರತೆಯ ವಿರುದ್ಧ ಗಿಗ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ನಿಮಿಷದಲ್ಲಿ ಡೆಲಿವರಿ ನೀಡಬೇಕಾದ ಒತ್ತಡ ಇರುವುದರಿಂದ ಸುರಕ್ಷತೆಯ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಗಿಗ್ ಕಾರ್ಮಿಕರು 10 ನಿಮಿಷದಲ್ಲಿ ಡೆಲಿವರಿ ಎಂಬ ಆಯ್ಕೆಯನ್ನು ರದ್ದುಗೊಳಿಸುವಂತೆ ಆಹಾರ ಮತ್ತು ದಿನಸಿ ವಿತರಣಾ ವೇದಿಕೆಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್

ಇಂದು ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 1.7 ಲಕ್ಷ ವಿತರಣಾ ಸಿಬ್ಬಂದಿ ಭಾಗವಹಿಸಿದ್ದಾರೆ. ಇದು ಸ್ವಿಗ್ಗಿ, ಜೊಮಾಟೊ, ಜೆಪ್ಟೊ ಮತ್ತು ಅಮೆಜಾನ್ ನಡೆಸುವ ತ್ವರಿತ-ಡೆಲಿವರಿ ಸೇವೆಗಳನ್ನು ಅಡ್ಡಿಪಡಿಸುವ ಸಾಧ್ಯತೆಯಿದೆ.

“ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಅಪಘಾತಗಳು, ಗಾಯಗಳು ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿರುವ 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ” ಎಂದು ಗಿಗ್ ಕಾರ್ಮಿಕ ಸಲಾವುದ್ದೀನ್ ಹೇಳಿದ್ದಾರೆ. ಗಿಗ್ ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Wed, 31 December 25