ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ; ಕುಟುಂಬಕ್ಕೆ ಪ್ರಧಾನಿ ಮೋದಿಯ ಪತ್ರ ನೀಡಿದ ಸಚಿವ ಜೈಶಂಕರ್
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಇಂದು ಢಾಕಾದಲ್ಲಿ ನಡೆದಿದೆ. ಈ ವೇಳೆ ಲಕ್ಷಾಂತರ ಜನರು ಸೇರಿದ್ದರು. ಖಲೀದಾ ಅವರನ್ನು ಅವರ ಪತಿ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಗುವುದು. ಮಾಣಿಕ್ ಮಿಯಾ ಅವೆನ್ಯೂದಲ್ಲಿ ಅಂತ್ಯಕ್ರಿಯೆ ಸಮಾರಂಭ ನಡೆದಿದೆ. ಈ ವೇಳೆ ಹಲವಾರು ವಿದೇಶಿ ಗಣ್ಯರು, ರಾಜಕೀಯ ಮುಖಂಡರು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಹಾಜರಿದ್ದರು. ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಂಡಿದ್ದರು.

ನವದೆಹಲಿ, ಡಿಸೆಂಬರ್ 31: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಂದು ಢಾಕಾದಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದಾಗಿ ಖಲೀದಾ ಜಿಯಾ ಮಂಗಳವಾರ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಹಲವು ದಶಕಗಳಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು.
ರಾಷ್ಟ್ರೀಯ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಗಾಗಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಬೆಂಬಲಿಗರು ಢಾಕಾದ ಬೀದಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಂತ್ಯಕ್ರಿಯೆಗಾಗಿ ರಾಜಧಾನಿ ಢಾಕಾದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: Khaleda Zia Death: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ
1981ರಲ್ಲಿ ಹತ್ಯೆಗೀಡಾದ ಅವರ ಪತಿ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿಯೇ ಶೇರ್-ಎ-ಬಾಂಗ್ಲಾ ನಗರದ ಜಿಯಾ ಉದ್ಯಾನ್‌ನಲ್ಲಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ನಡೆದಿದೆ. ಈ ವೇಳೆ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
HE @DrSJaishankar, Hon. 🇮🇳External Affairs Minister, in Dhaka, conveys condolences of the people | Govt of #India as #Bangladesh mourns passing of former 🇧🇩Prime Minister #BegumKhaledaZia, recognized her contribution to #democracy and expressed optimism to strengthen 🇧🇩🇮🇳 ties… pic.twitter.com/P020Nixrfu
— Riaz Hamidullah (@hamidullah_riaz) December 31, 2025
ಭಾರತವನ್ನು ಪ್ರತಿನಿಧಿಸಿ ಢಾಕಾದಲ್ಲಿ ನಡೆದ ಖಲೀದಾ ಜಿಯಾ ಅವರ ಅಂತಿಮ ಯಾತ್ರೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಭಾಗವಹಿಸಿದ್ದರು. ಅಂತ್ಯಕ್ರಿಯೆಗೂ ಮೊದಲು ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಬರೆದ ವೈಯಕ್ತಿಕ ಪತ್ರವನ್ನು ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರಿಗೆ ಹಸ್ತಾಂತರಿಸಿದರು.
“ಢಾಕಾಗೆ ತೆರಳಿ ಬಿಎನ್‌ಪಿಯ ಕಾರ್ಯಕಾರಿ ಅಧ್ಯಕ್ಷೆ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರನ್ನು ಭೇಟಿಯಾದೆ. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಪತ್ರವನ್ನು ಅವರಿಗೆ ಹಸ್ತಾಂತರಿಸಿದೆ. ಭಾರತ ಸರ್ಕಾರ ಮತ್ತು ಜನರ ಪರವಾಗಿ ತೀವ್ರ ಸಂತಾಪ ಸೂಚಿಸಿದೆ” ಎಂದು ವಿದೇಶಾಂಗ ಸಚಿವ ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ನಾಳೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಸಚಿವ ಜೈಶಂಕರ್
ಖಲೀದಾ ಜಿಯಾ ಅವರ ದೃಷ್ಟಿಕೋನ ಮತ್ತು ಮೌಲ್ಯಗಳು ಭಾರತದ ಅಭಿವೃದ್ಧಿ ಮತ್ತು ಬಾಂಗ್ಲಾದೇಶದ ಪಾಲುದಾರಿಕೆಗೆ ಮಾರ್ಗದರ್ಶನ ನೀಡುತ್ತವೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 31 December 25




