ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; 2 ವಾರಗಳಲ್ಲಿ ಮೂರನೇ ಘಟನೆ
ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ ಮತ್ತೆ ಹಿಂಸಾಚಾರ ಸಂಭವಿಸಿದೆ. ಮೈಮೆನ್ಸಿಂಗ್‌ನ ಭಾಲುಕಾದಲ್ಲಿರುವ ಗಾರ್ಮೆಂಟ್ ಕಾರ್ಖಾನೆಯಲ್ಲಿ ಹಿಂದೂ ಅನ್ಸಾರ್ ಸದಸ್ಯ ಬಜೇಂದ್ರ ಬಿಸ್ವಾಸ್ (42) ಅವರನ್ನು ಸಹೋದ್ಯೋಗಿಯೊಬ್ಬರು ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ. ಅನ್ಸಾರ್ ಎಂಬುದು ಗ್ರಾಮ ರಕ್ಷಣಾ ಘಟಕವಾಗಿ ಕಾರ್ಯನಿರ್ವಹಿಸುತ್ತಿರುವ ಅರೆಸೈನಿಕ ಪಡೆ. ಬಜೇಂದ್ರ ಬಿಸ್ವಾಸ್ ಕಾರ್ಖಾನೆ ಭದ್ರತೆಗಾಗಿ ನಿಯೋಜಿಸಲಾದ ಅನ್ಸಾರ್ ಸದಸ್ಯರಾಗಿದ್ದರು. ಬಾಂಗ್ಲಾದಲ್ಲಿ ಕಳೆದ 2 ವಾರಗಳಲ್ಲಿ ನಡೆದ 3ನೇ ಹಿಂದೂ ಹತ್ಯೆ ಇದಾಗಿದೆ.

ಢಾಕಾ, ಡಿಸೆಂಬರ್ 30: ಬಾಂಗ್ಲಾದೇಶದ (Bangladesh) ಮೈಮೆನ್ಸಿಂಗ್‌ನ ಭಾಲುಕಾ ಉಪ ಜಿಲ್ಲೆಯಲ್ಲಿ 40 ವರ್ಷದ ಹಿಂದೂ ವ್ಯಕ್ತಿ ಬಜೇಂದ್ರ ಬಿಸ್ವಾಸ್ ಅವರನ್ನು ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನೋಮನ್ ಮಿಯಾ ಎಂಬಾತನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೊಲೆಯಾದಾತ ಮತ್ತು ಆರೋಪಿ ಇಬ್ಬರೂ ಬಾಂಗ್ಲಾದೇಶದ ಗೃಹ ಸಚಿವಾಲಯದ ಅಧೀನದಲ್ಲಿರುವ ಅರೆಸೈನಿಕ ಪಡೆಯಾದ ಅನ್ಸಾರ್‌ನ ಸದಸ್ಯರಾಗಿದ್ದರು. ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಗುಂಪು ಹಲ್ಲೆ ನಡೆದ ನಂತರ ಈ ಘಟನೆ ನಡೆದಿದೆ.
ವರದಿಯ ಪ್ರಕಾರ, ಸೋಮವಾರ ಸಂಜೆ 6.30ರ ಸುಮಾರಿಗೆ ಮೆಹ್ರಾಬರಿ ಪ್ರದೇಶದ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಅನ್ಸಾರ್ ಸದಸ್ಯ ಮೃತ ಬಿಸ್ವಾಸ್ ಸಿಲ್ಹೆಟ್ ಸದರ್ ಉಪ ಜಿಲ್ಲೆಯ ಕದಿರ್ಪುರ್ ಗ್ರಾಮದ ಪ್ರೊಬಿತ್ರ ಬಿಸ್ವಾಸ್ ಅವರ ಮಗ. ಆರೋಪಿ ನೋಮನ್ ಮಿಯಾ ಸುನಮ್‌ಗಂಜ್ ಜಿಲ್ಲೆಯ ಬಲುತುರಿ ಬಜಾರ್ ಪ್ರದೇಶದ ಲುಟ್ಫರ್ ರೆಹಮಾನ್ ಅವರ ಮಗ. ಈ ಘಟನೆಯ ಸಮಯದಲ್ಲಿ ನೋಮನ್ ಮಿಯಾ ಮತ್ತು ಬಿಸ್ವಾಸ್ ಒಟ್ಟಿಗೆ ಕುಳಿತಿದ್ದರು. ಈ ವೇಳೆ ನೋಮನ್ ತನ್ನ ಬಳಿಯಿದ್ದ ಶಾಟ್‌ಗನ್‌ನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಬಿಸ್ವಾಸ್ ಎಡ ತೊಡೆಗೆ ಗಂಭೀರವಾಗಿ ಗಾಯವಾಯಿತು.
ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ
ತಕ್ಷಣ ಬಿಸ್ವಾಸ್ ಅವರ ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಬಿಸ್ವಾಸ್ ಸತ್ತಿದ್ದಾರೆಂದು ಘೋಷಿಸಿದರು. ಗುಂಡು ಹಾರಿಸಿದ ಆರೋಪಿ ನೋಮನ್ ಮಿಯಾ (22)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಸಮಯದಲ್ಲಿ ಸುಮಾರು 20 ಅನ್ಸಾರ್ ಸಿಬ್ಬಂದಿ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆಯಾದ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್ ಅವರನ್ನು ಹೊಡೆದು ಕೊಲ್ಲಲಾಯಿತು. ಈ ಘಟನೆ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು.
ಇದನ್ನೂ ಓದಿ: Khaleda Zia Death: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ
ದೀಪು ಚಂದ್ರ ದಾಸ್ ನಂತರ, 3 ದಿನಗಳ ಹಿಂದೆ ಢಾಕಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯಾದ ಅಮೃತ್ ಮಂಡಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಮೇಲೆ ಸುಲಿಗೆ ಆರೋಪ ಹೊರಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಮತ್ತು ಅವರ ಮನೆಗಳನ್ನು ಸುಡಲಾಗುತ್ತಿದೆ. ಇದಕ್ಕೆ ಭಾರತವೂ ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




