ದೆಹಲಿ: ಕಿಸಾನ್ ಸಮ್ಮಾನ್ ಯೋಜನೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನ್ನದಾತರಿಗೆ ನೆರವಾಗುವ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿವರ್ಷ ಆರು ಸಾವಿರ ಹಣಕಾಸಿನ ನೆರವು ನೀಡುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ನಿನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿದ ನಮೋ ಕಲ್ಪತರು ನಾಡಲ್ಲಿ ನಿಂತು ದೇಶದ 6 ಕೋಟಿ ರೈತರ ಬ್ಯಾಂಕ್ ಖಾತೆಗೆ 12 ಸಾವಿರ ಕೋಟಿ ಹಣವನ್ನ ನೇರವಾಗಿ ವರ್ಗಾಯಿಸಿದ್ದಾರೆ. ಆದ್ರೆ ಎಲ್ಲಾ ಅರ್ಹ ರೈತರಿಗೂ ಯೋಜನೆಯ ಲಾಭ ಸಿಕ್ಕಿದೆಯಾ ಅಂದ್ರೆ ಅದಕ್ಕುತ್ತರ ಇಲ್ಲ ಅಂತಿವೆ ಅಂಕಿ ಅಂಶಗಳು.
ಅರ್ಧದಷ್ಟು ರೈತರಿಗೆ ಮಾತ್ರ ಕಿಸಾನ್ ಸಮ್ಮಾನ್ ಹಣ!
ನಮ್ಮ ದೇಶದಲ್ಲಿ ಒಟ್ಟು 14 ಕೋಟಿ ಮಂದಿ ಸಣ್ಣ ಮತ್ತು ಮಧ್ಯಮ ರೈತರಿದ್ದಾರೆ. ಇವರೆಲ್ಲರಿಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ವರ್ಗಾಯಿಸೋದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಆದ್ರೆ, ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದ್ರೂ ಎಲ್ಲಾ ರೈತರಿಗೆ ಯೋಜನೆಯ ಲಾಭ ಸಿಕ್ಕಿಲ್ಲ.
ಮೀಸಲಿಟ್ಟ ಮತ್ತು ಕೊಟ್ಟ ಹಣ:
ಅಂದ್ಹಾಗೆ 2019-20ರಲ್ಲಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಒಟ್ಟು 75 ಸಾವಿರ ಕೋಟಿ ಹಣವನ್ನ ಮೀಸಲಿಡಲಾಗಿತ್ತು. ಈ ಹಣದಲ್ಲಿ 2019ರ ಅಕ್ಟೋಬರ್ವರೆಗೆ ಕೇವಲ 32 ಸಾವಿರದ 577 ಕೋಟಿ ಹಣವನ್ನ ವರ್ಗಾಯಿಸಲಾಗಿದೆ. ಅಂದ್ರೆ, ಸರಿ ಸುಮಾರು 43 ಪರ್ಸೆಂಟ್ನಷ್ಟು ಹಣ ಮಾತ್ರ ಅನ್ನದಾತರ ಅಕೌಂಟ್ಗಳಿಗೆ ಟ್ರಾನ್ಸ್ಫರ್ ಆಗಿದೆ. ಉಳಿದ ಹಣವನ್ನ ನೀಡದಿರೋದಕ್ಕೆ ಬೇರೆ ಬೇರೆ ಕಾರಣಗಳಿವೆ.
ಈ ಯೋಜನೆಯು ಆಧಾರ್ ಸಂಖ್ಯೆ ಆಧರಿತವಾಗಿದೆ. ರೈತರು ತಮ್ಮ ಆಧಾರ್ ಸಂಖ್ಯೆ , ಜಮೀನಿನ ಪಹಣಿ, ಬ್ಯಾಂಕ್ ಖಾತೆಯ ದಾಖಲೆ ಕೊಟ್ಟು ಫಲಾನುಭವಿಗಳಾಗಬೇಕು. ಆದ್ರೆ ಈ ದಾಖಲೆಗಳನ್ನ ನೀಡುವುದೇ ದೊಡ್ಡ ಸಮಸ್ಯೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಸರಿಯಾಗಿರಲ್ಲ. ಜಮೀನಿನ ದಾಖಲೆ ಪತ್ರಗಳು ಸರಿ ಇರಲ್ಲ. ಹೀಗಾಗಿ ಎಲ್ಲಾ ರೈತರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕಂತಿನಿಂದ ಕಂತಿಗೆ ಫಲಾನುಭವಿಗಳ ಸಂಖ್ಯೆ ಕೂಡ ಕುಸಿಯುತ್ತಿದೆ.
2018ರ ಡಿಸೆಂಬರ್ನಿಂದ 2019ರ ಮಾರ್ಚ್ವರೆಗೆ ಮೊದಲ ಕಂತಿನ ಹಣ ನೀಡಲಾಗಿದ್ದು, ಆಗ 7 ಕೋಟಿ ರೈತರ ಬ್ಯಾಂಕ್ ಖಾತೆಗೆ 14,055 ಕೋಟಿ ರೂಪಾಯಿಯನ್ನ ವರ್ಗಾಯಿಸಲಾಗಿದೆ. ಎರಡನೇ ಕಂತಿನಲ್ಲಿ 2019 ರ ಏಪ್ರಿಲ್ನಿಂದ ಜುಲೈವರೆಗೆ ಹಣ ನೀಡಲಾಗಿದೆ. ಈ ಅವಧಿಯಲ್ಲಿ 5 ಕೋಟಿ 90 ಲಕ್ಷ ರೈತರಿಗೆ 11,845 ಕೋಟಿ ಹಣವನ್ನ ನೀಡಲಾಗಿದೆ. ಮೂರನೇ ಕಂತಿನಲ್ಲಿ 2019ರ ಆಗಸ್ಟ್ನಿಂದ 2019ರ ಅಕ್ಟೋಬರ್ವರೆಗೆ 3.33 ಕೋಟಿ ರೈತರ ಖಾತೆಗಳಿಗೆ 6,677 ಕೋಟಿ ರೂಪಾಯಿ ಹಣ ಹಾಕಲಾಗಿದೆ. ಅಲ್ಲಿಗೆ ಮೊದಲ ಕಂತಿನಲ್ಲಿ ಹಣ ಪಡೆದವರಿಗಿಂತ ಎರಡು ಹಾಗೂ ಮೂರನೇ ಕಂತಿನಲ್ಲಿ ಹಣ ಪಡೆದವರ ಸಂಖ್ಯೆಯಲ್ಲಿ ಕುಸಿತವಾಗಿದೆ.
ಯೋಜನೆ ಬಗೆಗಿನ ಈ ಎಲ್ಲಾ ಮಾಹಿತಿಯನ್ನ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯೇ ಸಂಸತ್ಗೆ ಲಿಖಿತ ರೂಪದಲ್ಲಿ ನೀಡಿದೆ. ಯೋಜನೆ ಜಾರಿಯಲ್ಲಿ ಸಮಸ್ಯೆ ಇದೆ ಅಂತ ಸರ್ಕಾರವೇ ಹೇಳಿದೆ. ಆಧಾರ್ ಸಂಖ್ಯೆ ಖಚಿತಪಡಿಸಿಕೊಳ್ಳೋದು, ಅದಕ್ಕೆ ಜಮೀನು ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡೋದ್ರಲ್ಲಿ ಪ್ರಾಬ್ಲಂ ಆಗ್ತಿದೆ. ಕೆಲವೆಡೆ ರೈತರ ಹೆಸರಿಗೂ ಆಧಾರ್ ಕಾರ್ಡ್ನಲ್ಲಿರೋ ಹೆಸರಿಗೂ ಹೊಂದಾಣಿಕೆ ಆಗ್ತಿಲ್ಲ. ಬಿಹಾರ, ಜಾರ್ಖಂಡ್, ಉತ್ತರಾಖಂಡ್ನಲ್ಲಿ ರೈತರ ಜಮೀನಿನ ದಾಖಲೆ ಪತ್ರಗಳೇ ಸರಿಯಾಗಿಲ್ಲ. ಒಟ್ನಲ್ಲಿ, ಕೇಂದ್ರದ ಮೋದಿ ಸರ್ಕಾರದ ಮಹತ್ವಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಎಲ್ಲಾ ರೈತರಿಗೂ ಸಿಗ್ತಿಲ್ಲ. ಯೋಜನೆ ಜಾರಿಗೆ ಎದುರಾಗ್ತಿರೋ ಹತ್ತಾರು ವಿಘ್ನಗಳೇ ಇದಕ್ಕೆ ಕಾರಣ ಅನ್ನೋದು ಸ್ಪಷ್ಟ.
Published On - 3:52 pm, Fri, 3 January 20