
ನವದೆಹಲಿ, ಜನವರಿ 26: ದೇಶದ ಸಂವಿಧಾನವನ್ನು ಅಂಗೀಕರಿಸಿದ ಸುದಿನ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾಬಲವನ್ನು ಜಗತ್ತಿಗೆ ಪ್ರದರ್ಶಿಸುವ ದಿನ ಮತ್ತೆ ಬಂದಿದೆ. ಗಣರಾಜ್ಯೋತ್ಸವ (Republic Day 2026) ದಿನದ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. 77ನೇ ಗಣರಾಜ್ಯೋತ್ಸವವನ್ನು ಶತಕೋಟಿ ಭಾರತಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ಸಮರ್ಪಿಸಲು ಅಣಿಯಾಗಿದ್ದಾರೆ. ನವದೆಹಲಿಯ ಕರ್ತವ್ಯಪಥ ಕೂಡ ಸಿದ್ಧವಾಗಿದೆ.
ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಯೂರೋಪಿಯನ್ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಭಾಗಿಯಾಗಲಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವವು ವಂದೇಮಾತರಂ ಗೀತೆಯ 150ನೇ ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಲಿದೆ. ಇನ್ನು, ಪಥಸಂಚಲನದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಸೇನಾಶಕ್ತಿ ಅನಾವರಣಗೊಳ್ಳಲಿದೆ.
ಈ ಬಾರಿಯ ಪಥಸಂಚಲನದಲ್ಲಿ ಆಪರೇಷನ್ ಸಿಂಧೂರ್ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿದೆ. ಇದರಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ ವಂದೇ ಮಾತರಂ ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಬಗ್ಗೆ ಪ್ರದರ್ಶನ ನೀಡಲಿದ್ದಾರೆ.
ಮೂವತ್ತು ಸ್ತಬ್ಧಚಿತ್ರಗಳ ಪೈಕಿ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಇದರಲ್ಲಿ ಪ್ರದರ್ಶಿಸಲಿವೆ.
ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 MM ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿ 21-ಸುತ್ತಿನ ಕುಶಾಲತೋಪು ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು, ಕೃಷಿಕರು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಧನ ಪಡೆದ ಕಂಪನಿಗಳ ಮುಖ್ಯಸ್ಥರು, ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಹೆಜ್ಜೆಹೆಜ್ಜೆಗೂ ಕಣ್ಗಾವಲು ಇರಿಸಲಾಗಿದೆ.
ದೆಹಲಿಯ ಪ್ರಮುಖ ರಸ್ತೆಗಳನ್ನ ಬ್ಲಾಕ್ ಮಾಡಲಾಗಿದ್ದು, ಹಲವು ಮಾರ್ಗಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಗಣರಾಜ್ಯೋತ್ಸವಕ್ಕೆ ರಾಷ್ಟ್ರ ರಾಜಧಾನಿ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:14 am, Mon, 26 January 26