ದೆಹಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಚಳುವಳಿಯಲ್ಲಿ ನಡೆದ ಅಹಿತಕರ ಘಟನೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಹೋರಾಟಗಾರ ದೀಪ್ ಸಿಧು ವಿರುದ್ಧ ದೆಹಲಿ ಕೋರ್ಟ್ ನ್ಯಾಯಾಂಗ ಬಂಧನ ಆದೇಶ ನೀಡಿದೆ. ಕೆಂಪುಕೋಟೆ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ದೀಪ್ ಸಿಧುವನ್ನು ದೆಹಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ದೀಪ್ ಸಿಧು ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಆರೋಪಿಸಿದ್ದರು. ಆರೋಪಕ್ಕೆ ಸಂಬಂಧಿಸಿ ಕೋರ್ಟ್, ದೀಪ್ ಸಿಧುವನ್ನು ಪೊಲೀಸ್ ಕಸ್ಟಡಿಗೆ ವಹಿಸಿತ್ತು. ಇಂದು (ಫೆ.23) ಪೊಲೀಸ್ ಕಸ್ಟಡಿಯಲ್ಲಿದ್ದ ದೀಪ್ ಸಿಧುವನ್ನು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಮುಂದೆ ಹಾಜರುಪಡಿಸಲಾಗಿತ್ತು.
ಜನವರಿ 26ರಂದು ಸಾವಿರಾರು ರೈತ ಹೋರಾಟಗಾರರು ಪೊಲೀಸರೊಂದಿಗೆ ಜಿದ್ದಾಜಿದ್ದಿ ನಡೆಸಿದ್ದರು. ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ರೈತ ಹೋರಾಟವು ಹಿಂಸಾತ್ಮಕ ರೂಪತಾಳಿತ್ತು. ಟ್ರ್ಯಾಕ್ಟರ್ನಲ್ಲಿ ಚಳುವಳಿ ಮಾಡುತ್ತಿದ್ದ ರೈತರು ಕೆಂಪುಕೋಟೆ ಆವರಣವನ್ನು ಪ್ರವೇಶಿಸಿದ್ದರು. ಕೆಂಪುಕೋಟೆಯಲ್ಲಿ ಧಾರ್ಮಿಕ ಬಾವುಟವನ್ನೂ ಹಾರಿಸಿದ್ದರು.
ಆ ದಿನದ ಹಿಂಸಾತ್ಮಕ ಘಟನಾವಳಿಗಳಲ್ಲಿ 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಓರ್ವ ರೈತ ಹೋರಾಟಗಾರ ಕೂಡ ಮೃತಪಟ್ಟಿದ್ದರು. ಜನವರಿ 26ರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವರ ವಿರುದ್ಧ ಕ್ರಮ ಕೈಗೊಂಡಿದ್ದರು. ದೂರು ದಾಖಲಿಸಿಕೊಂಡಿದ್ದರು.
ಮುಂದುವರಿದ ರೈತ ಚಳುವಳಿ
ಇಷ್ಟೆಲ್ಲಾ ಘಟನಾವಳಿಗಳ ನಡುವೆಯೂ ರೈತ ಚಳುವಳಿ ಮುಂದುವರಿದಿದೆ. ದೆಹಲಿ ಗಡಿಭಾಗಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಟಿಕ್ರಿ, ಸಿಂಘು ಹಾಗೂ ಘಾಜಿಪುರ್ಗಳಲ್ಲಿ ರೈತರು ಧರಣಿ ಕುಳಿತಿದ್ದಾರೆ. ಜತೆಗೆ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮತ್ತಿತರ ರೈತ ಮುಖಂಡರ ನೇತೃತ್ವದಲ್ಲಿ ಕಿಸಾನ್ ಮಹಾಪಂಚಾಯತ್ ನಡೆಯುತ್ತಿದೆ.
ದಿಶಾ ರವಿಗೆ ಜಾಮೀನು ಮಂಜೂರು
ಮತ್ತೊಂದೆಡೆ, ರೈತ ಹೋರಾಟದ ಮುಂದುವರಿದ ಭಾಗವಾಗಿದ್ದ ಟ್ವಿಟರ್ ಆಂದೋಲನಕ್ಕೆ ಸಂಬಂಧಪಟ್ಟ ToolKit ಪ್ರಕರಣದಲ್ಲಿ, ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಇಂದು ಜಾಮೀನು ಲಭಿಸಿದೆ. ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ಪಡೆಯಲು ದಿಶಾ ರವಿ ನ್ಯಾಯಾಲಯಕ್ಕೆ ₹ 1 ಲಕ್ಷ ಮೊತ್ತದ ಬಾಂಡ್ ಮತ್ತು ಅದೇ ಮೌಲ್ಯದ ಎರಡು ಶ್ಯೂರಿಟಿ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಪ್ರತಿಭಟನಾ ಸ್ಥಳ ಖಾಲಿ ಮಾಡಿ ಎಂದು ಬ್ಯಾನರ್ ಹಚ್ಚಿದ ದೆಹಲಿ ಪೊಲೀಸರು; ರೈತ ಮುಖಂಡರ ಆಕ್ರೋಶ
Toolkit Case: ಭಾರತಕ್ಕೆ ಅಪಖ್ಯಾತಿ ತರುವ ಜಾಗತಿಕ ಸಂಚಿನ ಭಾಗವಾಗಿದ್ದಾರೆ ದಿಶಾ ರವಿ: ದೆಹಲಿ ಪೊಲೀಸ್
Published On - 8:38 pm, Tue, 23 February 21