ಪ್ರತಿಭಟನಾ ಸ್ಥಳ ಖಾಲಿ ಮಾಡಿ ಎಂದು ಬ್ಯಾನರ್ ಹಚ್ಚಿದ ದೆಹಲಿ ಪೊಲೀಸರು; ರೈತ ಮುಖಂಡರ ಆಕ್ರೋಶ

Farmers Protest: ಪ್ರತಿಭಟನಾನಿರತ ರೈತರು ಸ್ಥಳ ಖಾಲಿ ಮಾಡಬೇಕು. ದೆಹಲಿ ಗಡಿಭಾಗದಿಂದ ಹಿಂತಿರುಗಬೇಕು ಎಂದು ಬ್ಯಾನರ್​ಗಳನ್ನು ಹಾಕಿದ್ದಾರೆ. ಪೊಲೀಸರ ಈ ನಡೆಯನ್ನು ರೈತರು ತೀವ್ರವಾಗಿ ಖಂಡಿಸಿದ್ದಾರೆ.

  • TV9 Web Team
  • Published On - 20:35 PM, 23 Feb 2021
ಪ್ರತಿಭಟನಾ ಸ್ಥಳ ಖಾಲಿ ಮಾಡಿ ಎಂದು ಬ್ಯಾನರ್ ಹಚ್ಚಿದ ದೆಹಲಿ ಪೊಲೀಸರು; ರೈತ ಮುಖಂಡರ ಆಕ್ರೋಶ
ಪೊಲೀಸ್ ಭದ್ರತೆ, ಸರ್ಕಾರ ರಸ್ತೆಗಳನ್ನು ಬೇಲಿ, ಬ್ಯಾರಿಕೇಡ್​ಗಳ ಮೂಲಕ ಬಂದ್ ಮಾಡಿರುವ ದೃಶ್ಯಗಳನ್ನು ನೋಡುತ್ತಿರುವ ಹೋರಾಟಗಾರರು. (ಸಂಗ್ರಹ ಚಿತ್ರ)

ದೆಹಲಿ: ರೈತ ಹೋರಾಟಗಾರರು ರಾಷ್ಟ್ರ ರಾಜಧಾನಿಯ ಗಡಿಭಾಗವನ್ನು ಖಾಲಿ ಮಾಡಬೇಕು ಎಂದು ಬರೆದಿರುವ ಬ್ಯಾನರ್​ಗಳನ್ನು ಪೊಲೀಸರು ಟಿಕ್ರಿ ಗಡಿಭಾಗದಲ್ಲಿ ಹಾಕಿರುವ ಬಗ್ಗೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು (Delhi Police), ಬ್ಯಾನರ್​ಗಳನ್ನು ಹಾಕಿರುವುದು ಇದೇ ಮೊದಲಲ್ಲ. ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲು ರೈತರಿಗೆ ಅವಕಾಶವಿಲ್ಲ ಎಂದು ತಿಳಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ರೈತ ಆಂದೋಲನದಲ್ಲಿ (Farmers Protest) ತೊಡಗಿಸಿಕೊಂಡಿರುವ ರೈತರು, ತಮ್ಮ ಸಾಂವಿಧಾನಿಕ ಹಕ್ಕನ್ನು ಪಡೆದಿದ್ದಾರೆ. ಚಳುವಳಿ ನಡೆಸದಂತೆ ತಡೆಯುವ ಪೊಲೀಸರ ನಡೆಯನ್ನು ನಾವು ವಿರೋಧಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (Samyukta Kisan Morcha) ಮುಖಂಡರು ತಿಳಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುವಂತೆ ರೈತರನ್ನು ಕೇಳಿಕೊಂಡಿದ್ದಾರೆ.

ಪಂಜಾಬ್, ಹರ್ಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶ ಭಾಗದ ಸಾವಿರಾರು ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸಿಂಘು, ಟಿಕ್ರಿ ಹಾಗೂ ಘಾಜಿಪುರ್ ಭಾಗಗಳಲ್ಲಿ ಕಳೆದ 90 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆ (MSP) ನೀಡುವ ಬಗ್ಗೆ ಖಚಿತತೆ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಪ್ರತಿಭಟನಾನಿರತ ರೈತರು ಸ್ಥಳ ಖಾಲಿ ಮಾಡಬೇಕು. ದೆಹಲಿ ಗಡಿಭಾಗದಿಂದ ಹಿಂತಿರುಗಬೇಕು ಎಂದು ಪೊಲೀಸರು ಬ್ಯಾನರ್​ಗಳನ್ನು ಹಾಕಿದ್ದಾರೆ. ಪೊಲೀಸರ ಈ ನಡೆಯನ್ನು ರೈತರು ತೀವ್ರವಾಗಿ ಖಂಡಿಸಿದ್ದಾರೆ. ರೈತ ಹೋರಾಟ ಕೊನೆಗೊಳಿಸಲು ಇಂಥ ಬೆದರಿಕೆ ಮತ್ತು ಎಚ್ಚರಿಕೆಗಳನ್ನು ನೀಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ತಿಳಿಸಿದ್ದಾರೆ.

ಪೊಲೀಸರು ಹಾಕಿರುವ ಬ್ಯಾನರ್​ಗಳಲ್ಲಿ ರೈತರು ಇಂತಿಷ್ಟೇ ದಿನದೊಳಗೆ ಗಡಿಭಾಗದಿಂದ ಹಿಂತೆರಳಬೇಕು ಎಂಬ ಗಡುವು ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಇದು ಸಹಜ ಪ್ರಕ್ರಿಯೆ ಅಷ್ಟೇ ಎಂದು ಹೇಳಿದ್ದಾರೆ. ರೈತರು ಹರ್ಯಾಣ ರಾಜ್ಯದ ಗಡಿಯಲ್ಲಿ ಧರಣಿ ಕುಳಿತುಕೊಂಡಿದ್ದಾರೆ. ಕಾನೂನು ಬಾಹಿರವಾಗಿ ರಾಷ್ಟ್ರ ರಾಜಧಾನಿ ಪ್ರವೇಶಿಸುವಂತಿಲ್ಲ ಎಂದು ತಿಳಿಸಲು ದೆಹಲಿ ಗಡಿಯಲ್ಲಿ ಬ್ಯಾನರ್​ಗಳನ್ನು ಅಳವಡಿಸಲಾಗಿದೆ. ಇದೊಂದು ಸಹಜ ಪ್ರಕ್ರಿಯೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Farmers Protest: ಪ್ರತಿಭಟನಾನಿರತ ಉತ್ತರ ಪ್ರದೇಶ ರೈತರೊಂದಿಗೆ ಮಾತುಕತೆ ನಡೆಸಿದ ಅರವಿಂದ್​ ಕೇಜ್ರಿವಾಲ್​; ಫೆ.28ಕ್ಕೆ ಮಹಾ ಕಿಸಾನ್ ಪಂಚಾಯತ್​​

Disha Ravi: ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು ಮಂಜೂರು