AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಕೊಟ್ಟ ಪಾಲಕರನ್ನು ಬೀದಿಪಾಲು ಮಾಡುವಂತಿಲ್ಲ, ದಾನಪತ್ರದಲ್ಲಿ ಈ ಷರತ್ತು ಉಲ್ಲೇಖಿಸಲು ಮದ್ರಾಸ್​ ಹೈಕೋರ್ಟ್ ಆದೇಶ

ಆಸ್ತಿಯನ್ನು ಬರೆದುಕೊಟ್ಟಾದ ಮೇಲೆ ಮಕ್ಕಳಿಂದ ಸಂಕಷ್ಟಕ್ಕೀಡಾದ ಪಾಲಕರು, ದಾನಪತ್ರವನ್ನು ಅನೂರ್ಜಿತಗೊಳಿಸುವಂತೆ ಹೈಕೋರ್ಟ್​ಗೆ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.

ಆಸ್ತಿ ಕೊಟ್ಟ ಪಾಲಕರನ್ನು ಬೀದಿಪಾಲು ಮಾಡುವಂತಿಲ್ಲ, ದಾನಪತ್ರದಲ್ಲಿ ಈ ಷರತ್ತು ಉಲ್ಲೇಖಿಸಲು ಮದ್ರಾಸ್​ ಹೈಕೋರ್ಟ್ ಆದೇಶ
ಮದ್ರಾಸ್​ ಹೈಕೋರ್ಟ್​ (ಸಂಗ್ರಹಚಿತ್ರ)
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 23, 2021 | 7:28 PM

Share

ಚೆನ್ನೈ: ಪಿತ್ರಾರ್ಜಿತವಾಗಿ ಆಸ್ತಿ ಪಡೆಯುವವರು ತಮ್ಮ ಪಾಲಕರ ಪಾಲನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ತಂದೆ-ತಾಯಿಯಿಂದ ತಮಗೆ ಆಸ್ತಿ ಬರುತ್ತಿದ್ದಂತೆ, ಮಕ್ಕಳು ಅವರನ್ನು ಅನಾಥರನ್ನಾಗಿಸಿದ ಎಷ್ಟೋ ಉದಾಹರಣೆಗಳು ಸಿಗುತ್ತವೆ. ಇನ್ನೂ ಕೆಲವರು ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಿ ಬೇರೆ ಏನನ್ನೋ ಮಾಡಲು ಮುಂದಾಗುತ್ತಾರೆ. ಆದರೆ ಮದ್ರಾಸ್​ ಹೈಕೋರ್ಟ್​ ಇದೀಗ ಒಂದು ಆದೇಶ ನೀಡಿದ್ದು, ಅದರ ಅನ್ವಯ ಆಸ್ತಿಯನ್ನು ಪಡೆದ ಮಕ್ಕಳು, ಪಾಲಕರ ಮೂಲ ಮತ್ತು ದೈಹಿಕ ಅಗತ್ಯಗಳ ಪೂರೈಕೆಯ ಜವಾಬ್ದಾರಿ ತೆಗೆದುಕೊಳ್ಳಲೇಬೇಕು.

ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಉಡುಗೊರೆ ರೂಪದಲ್ಲೋ ಅಥವಾ ಅವರ ಜೀವನವನ್ನು ಸೆಟ್ಲ್​ ಮಾಡುವ ದೃಷ್ಟಿಯಿಂದಲೇ ಉಯಿಲು ಬರೆದುಕೊಡಬಹುದು. ಆದರೆ ಹೀಗೆ ಆಸ್ತಿ ತೆಗೆದುಕೊಂಡ ಮಕ್ಕಳು ಪಾಲಕರನ್ನು ಕೈಬಿಡುವಂತೆ ಇಲ್ಲ. 2007ರ ಪಾಲಕರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್​ 23ರ ಅನ್ವಯ, ಅವರ ಮೂಲ ಮತ್ತು ದೈಹಿಕ ಅಗತ್ಯಗಳ ಪೂರೈಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕು. ಆಸ್ತಿ ವರ್ಗಾವಣೆ ದಾನಪತ್ರದಲ್ಲಿ ಈ ಷರತ್ತು ಕಡ್ಡಾಯವಾಗಿ ಉಲ್ಲೇಖವಾಗಿರಬೇಕು ಎಂದು ಮದ್ರಾಸ್​ ಹೈಕೋರ್ಟ್​ ಹೇಳಿದೆ.

ಹಿರಿಯರಿಂದ ಆಸ್ತಿ ಪಡೆದವರು ಅವರನ್ನು ಪಾಲನೆ-ಪೋಷಣೆ ಮಾಡಲು, ಅಗತ್ಯಗಳನ್ನು ಪೂರೈಸಲು ಒಪ್ಪಿಕೊಳ್ಳದೆ ಇದ್ದರೆ, ಆ ಆಸ್ತಿ ವರ್ಗಾವಣೆ ವಂಚನೆ, ಬಲವಂತದಿಂದ ಅಥವಾ ಅನುಚಿತ ಪ್ರಭಾವದಿಂದ ಆಗಿದೆ ಎಂದೇ ಪರಿಗಣಿಸಲಾಗುತ್ತದೆ. ಹೀಗೆ ಹಿರಿಯ ನಾಗರಿಕರು ತಮ್ಮ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಿದಾಗ ಆ ದಾನಪತ್ರದ ದಾಖಲೆಗಳಲ್ಲಿ 2007ರ ಪಾಲಕರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್​ 23 ಉಲ್ಲೇಖವಾಗಿದೆಯಾ ಎಂಬುದನ್ನು ಆಯಾ ಸಬ್​ ರಿಜಿಸ್ಟ್ರಾರ್​ /ರಿಜಿಸ್ಟ್ರಾರ್​ಗಳು ಖಚಿತಪಡಿಸಬೇಕು. ಆಸ್ತಿ ವರ್ಗಾವಣೆ ಆಗುವಾಗ ದಾಖಲೆಯಲ್ಲಿ ಈ ಅಂಶ ಉಲ್ಲೇಖವಾದರೆ ಆಸ್ತಿ ಪಡೆದವರಿಗೆ ಅದನ್ನು ಮಾರಾಟ ಮಾಡುವ ಅಧಿಕಾರ ಇರುವುದಿಲ್ಲ. ಹಾಗೂ ಒಮ್ಮೆ ಮಾರಾಟ ಮಾಡಲು ಮುಂದಾದರೆ ಅದನ್ನು ವರ್ಗಾಯಿಸಿದ ಪಾಲಕರು ತಡೆ ನೀಡುವಂತೆ ಕೋರ್ಟ್​ ಮೆಟ್ಟಿಲೇರಬಹುದು. ದಾನಪತ್ರವನ್ನು ಅನೂರ್ಜಿತಗೊಳಿಸಬಹುದು. ಹೀಗಾದಾಗ ಸಹಜವಾಗಿ ಆಸ್ತಿ ಮಾರಾಟ ಮಾಡಲು ಮುಂದಾದವರು, ಖರೀದಿಸಲು ಮುಂದಾದವರು ಇಬ್ಬರೂ ಅಪಾಯಕ್ಕೆ ಸಿಲುಕುತ್ತಾರೆ ಎಂದು ನ್ಯಾಯಮೂರ್ತಿ ಎಸ್​. ವೈದ್ಯನಾಥನ್ ಹೇಳಿದ್ದಾರೆ.

ಸೆಕ್ಷನ್​ 23 ಉಲ್ಲೇಖವಾಗದೆ ಇದ್ದರೆ ಕಷ್ಟ ಆಸ್ತಿ ವರ್ಗಾವಣೆ ದಾಖಲೆಯಲ್ಲಿ ಪಾಲಕರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ 2007ರ ಕಾಯ್ದೆಯ ಸೆಕ್ಷನ್​ 23 ಉಲ್ಲೇಖವಾಗದೆ ಇದ್ದರೆ ಇದು ಸಾಧ್ಯವಿಲ್ಲ. ಆಸ್ತಿಯನ್ನು ಪಡೆದ ಮಕ್ಕಳು ಅದರ ಮಾರಾಟಕ್ಕೆ ಮುಂದಾದರೆ, ಪಾಲಕರ ಪಾಲನೆಗೆ ಹಿಂದೇಟು ಹಾಕಿದರೆ ಕಷ್ಟವಾಗುತ್ತದೆ. ಆಸ್ತಿ ವರ್ಗಾವಣೆ ಮಾಡಿದವರು ಮತ್ತೆ ಕೋರ್ಟ್​ಗೆ ಬಂದರೂ ದಾನಪತ್ರ ಅನೂರ್ಜಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಆಸ್ತಿಯನ್ನು ಬರೆದುಕೊಟ್ಟಾದ ಮೇಲೆ ಮಕ್ಕಳಿಂದ ಸಂಕಷ್ಟಕ್ಕೀಡಾದ ಪಾಲಕರು, ದಾನಪತ್ರವನ್ನು ಅನೂರ್ಜಿತಗೊಳಿಸುವಂತೆ ಹೈಕೋರ್ಟ್​ಗೆ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರು ಮಕ್ಕಳಿಂದಲೇ ಬೀದಿಗೆ ಬಂದವರಾಗಿದ್ದಾರೆ. ಆಸ್ತಿ ಪಡೆದ ನಂತರ ಪಾಲಕರನ್ನು ತ್ಯಜಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಾದರೂ ಒಮ್ಮೆ ಬರೆದುಕೊಟ್ಟ ಆಸ್ತಿಯ ದಾನಪತ್ರವನ್ನು ಅನೂರ್ಜಿತಗೊಳಿಸಲು ಸಾಧ್ಯವಿರಲಿಲ್ಲ.

ಹೀಗೆ ಪಾಲಕರನ್ನು ಮನೆಯಿಂದ ಓಡಿಸುವ, ಅವರನ್ನು ಹಿಂಸಿಸುವ ಮಕ್ಕಳ ಬಗ್ಗೆಯೂ ಉಲ್ಲೇಖ ಮಾಡಿದ ನ್ಯಾಯಾಧೀಶ ವೈದ್ಯನಾಥನ್​, ಪಾಲಕರನ್ನು ಕಾಳಜಿ ಮಾಡದೆ, ಅವರನ್ನು ಬೀದಿಪಾಲು ಮಾಡುವ ಮಕ್ಕಳಿಗೆ 2007ರ ಕಾಯ್ದೆಯ ಸೆಕ್ಷನ್​ 24ರ ಅನ್ವಯ ಜೈಲುಶಿಕ್ಷೆ, ದಂಡವನ್ನು ವಿಧಿಸಬಹುದು. ಅಂದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಬಹುದು ಎಂದು ಸೆಕ್ಷನ್ 24 ಹೇಳುತ್ತದೆ. ಆದರೆ ಜೈಲು ಶಿಕ್ಷೆಯನ್ನೇ ಕಡ್ಡಾಯ ಮಾಡಬೇಕು ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಆಟಿಕೆ ಮಾರುವ ಮಕ್ಕಳ ಮಾಹಿತಿ ಸಂಗ್ರಹಿಸಿ -BBMP, ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ