ನೀಟ್ ಪಿಜಿ 2021ರ ಕೌನ್ಸಿಲಿಂಗ್ಗೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ಹಲವು ರೆಸಿಡೆಂಟ್ ವೈದ್ಯ(Resident Doctors)ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ನಿನ್ನೆ ಸುಪ್ರೀಂಕೋರ್ಟ್ (Supreme Court)ನತ್ತ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ಕೋಪಗೊಂಡ ರೆಸಿಡೆಂಟ್ ವೈದ್ಯರು ಸಂಜೆ 8 ಗಂಟೆ ಹೊತ್ತಿಗೆ ಮತ್ತೆ ಎಲ್ಲರೂ ಒಟ್ಟು ಗೂಡಿ ಆರೋಗ್ಯ ಸಚಿವರ ಮನೆಯತ್ತ ಹೊರಟಿದ್ದರು.
ಈ ಬಗ್ಗೆ ಆರ್ಎಂಎಲ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯ ಡಾ. ಸರ್ವೇಶ್ ಮಾತನಾಡಿ, ನಾವು ನಿನ್ನೆ ಬೆಳಗ್ಗೆ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದವು. ಆದರೆ ಪೊಲೀಸರು ನಮ್ಮ ಮೇಲೆ ಕೈ ಮಾಡಿದ್ದಾರೆ. ಮಹಿಳಾ ವೈದ್ಯರೂ ಸೇರಿ ಹಲವರು ಗಾಯಗೊಂಡಿದ್ದೇವೆ. ನಮ್ಮ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಸುಮಾರು 300 ರೆಸಿಡೆಂಟ್ ವೈದ್ಯರು ಪೊಲೀಸರು ವಶಕ್ಕೆ ಪಡೆದಿದ್ದಾಗಿ ತಿಳಿದುಬಂದಿದೆ. ಹೀಗೆ ಪೊಲೀಸರು ತಮ್ಮನ್ನು ವಶಕ್ಕೆ ತೆಗೆದುಕೊಳ್ಳುವ ಹೊತ್ತಲ್ಲಿ ವೈದ್ಯರು ರಾಷ್ಟ್ರಗೀತೆ ಹಾಡುತ್ತಿದ್ದರು ಎನ್ನಲಾಗಿದೆ.
ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿದ ದೆಹಲಿ ಆಸ್ಪತ್ರೆಯ ಡಾ. ಗೌರವ್, ಇದು ಭಾರತದ ಇತಿಹಾಸದಲ್ಲೇ ಕರಾಳ ದಿನ. ವೈದ್ಯರ ಮೇಲೆ ಅದು ಹೇಗೆ ಪೊಲೀಸರು ಕೈಮಾಡುತ್ತಾರೆ? ಕೊರೊನಾ ಸಾಂಕ್ರಾಮಿಕ ವಿರುದ್ಧ ನಾವು ಹೋರಾಡಿದ್ದೇವೆ. ಪಿಜಿ ಕೌನ್ಸಿಲಿಂಗ್ ಬೇಗ ನಡೆಸಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕಾಗಿ ನಾವು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನೀಟ್ ಪಿಜಿ ಪರೀಕ್ಷೆ ಸೆಪ್ಟೆಂಬರ್ 12ರಲ್ಲಿ ನಡೆದಿದೆ. ಆದರೆ ಕೆಲವು ಕಾನೂನುಗಳಿಂದಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ತುಂಬ ವಿಳಂಬವಾಗುತ್ತಿರುವುದನ್ನು ರೆಸಿಡೆಂಟ್ ವೈದ್ಯರು ವಿರೋಧಿಸುತ್ತಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಬೇಕು ಎಂಬ ಬೇಡಿಕೆಯನ್ನೂ ಭಾರತೀಯ ವೈದ್ಯಕೀಯ ಸಂಘ ಮುಂದಿಟ್ಟಿದೆ.
ಇದನ್ನೂ ಓದಿ: ಆರ್ಡರ್ ಮಾಡಿದ್ದು 1 ಲಕ್ಷ ರೂ ಐಫೋನ್, ಆನ್ಲೈನ್ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್
Published On - 9:48 am, Tue, 28 December 21