ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ತರಬೇತಿ ನಿರತ ವೈದ್ಯೆಯ ಅತ್ಯಾಚಾರ, ಕೊಲೆ ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಬಂಗಾಳ ಸರ್ಕಾರ ಕೋಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಿದೆ. ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ (ಜನವರಿ 21) ಕಲ್ಕತ್ತಾ ಹೈಕೋರ್ಟ್‌ಗೆ ತೆರಳಿದೆ.
ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಸೀಲ್ದಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿ ದೇಬಂಗ್ಶು ಬಸಾಕ್ ಅವರ ಬಳಿ ಮನವಿ ಮಾಡಿದರು. ಪ್ರಕರಣ ದಾಖಲಿಸಲು ಅವಕಾಶ ನೀಡಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ತನಿಖೆಯನ್ನು ರಾಜ್ಯ ಪೊಲೀಸರಿಂದ ಬಲವಂತವಾಗಿ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದರು.
ಮತ್ತಷ್ಟು ಓದಿ: RG Kar Case:ಆರ್.ಜಿ ಕರ್ ಅತ್ಯಾಚಾರ ಪ್ರಕರಣ, ಆರೋಪಿ ಸಂಜಯ್ಗೆ ಜೀವಾವಧಿ ಶಿಕ್ಷೆ
ಮಮತಾ ಬ್ಯಾನರ್ಜಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅನ್ನು ಟೀಕಿಸಿದರು. ಮೊದಲ ದಿನದಿಂದಲೇ ನಾವೆಲ್ಲರು ಮರಣದಂಡನೆಗೆ ಒತ್ತಾಯಿಸಿದ್ದೆವು, ಆದರೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ನಾವು ಇನ್ನೂ ನಮ್ಮ ಬೇಡಿಕೆಗೆ ಬದ್ಧರಾಗಿದ್ದೇವೆ.
ಆರ್ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಂಜಯ್ ರಾಯ್ನನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.
ನಂತರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸೀಲ್ದಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿತು. ಇಂಥಾ ಘೋರ ಅಪರಾಧಕ್ಕೆ ಕೇವಲ ಜೀವಾವಧಿ ಶಿಕ್ಷೆಯೇ ಎಂದು ಕೇಳುತ್ತಾ ಜನರು ರಾಷ್ಟ್ರವ್ಯಾಪಿ ಪ್ರತಿಭಟನೆಗಿಳಿದಿದ್ದಾರೆ.
ಸೆಕ್ಷನ್ 64ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡವನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 5 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಆಗಸ್ಟ್ 9ರಂದು ತರಬೇತಿ ನಿರತ ವೈದ್ಯೆಯ ಶವ ಪತ್ತೆಯಾಗಿತ್ತು. ಘಟನೆಯ ನಂತರ, ಅಪರಾಧಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಬಂಧಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Tue, 21 January 25