India Together ಹ್ಯಾಷ್​ಟ್ಯಾಗ್​ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್

ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಮತ್ತು ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ

India Together ಹ್ಯಾಷ್​ಟ್ಯಾಗ್​ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
Edited By:

Updated on: Feb 03, 2021 | 10:12 PM

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಮತ್ತು ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ನಡುವೆಯೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆಯೊಂದನ್ನು ಹೊರಡಿಸಿದೆ.

ಪ್ರಕಟಣೆಯಲ್ಲಿ ಏನಿದೆ?
ಈ ರೀತಿಯ ವಿಷಯಗಳಿಗೆ ಪ್ರತಿಕ್ರಿಯೆ ನೀಡುವ ಮುನ್ನ ನಿಜ ಏನು ಎಂಬುದನ್ನು ತಿಳಿದುಕೊಂಡು ಸಮಸ್ಯೆಯನ್ನು ಅರಿಯಿರಿ ಎಂದು ನಾವು ವಿನಂತಿಸುತ್ತೇವೆ. ವಿಶೇಷವಾಗಿ ಸೆಲಬ್ರಿಟಿ ಅಥವಾ ಇನ್ನಿತರರು ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಷ್​​ಟ್ಯಾಗ್ ಮತ್ತು ಕಾಮೆಂಟ್​ಗಳ ಮೂಲಕ ಸಂಚಲನ ಸೃಷ್ಟಿಸಿದಾಗ, ಎಲ್ಲ ಸಂದರ್ಭಗಳಲ್ಲಿಯೂ ಅದು ನಿಖರವಾದುದು ಅಥವಾ ಜವಾಬ್ದಾರಿಯುತವಾದುದು ಆಗಿರುವುದಿಲ್ಲ ಎಂದಿದೆ.

ಈ ಪ್ರಕಟಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು #IndiaTogether #IndiaAgainstPropaganda ಎಂಬ ಹ್ಯಾಷ್​​ಟ್ಯಾಗ್ ಜತೆ ಟ್ವೀಟ್ ಮಾಡಿದ್ದಾರೆ.

ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳು
ಸರ್ಕಾರದ ಈ ಪ್ರಕಟಣೆಯನ್ನು ರೀಟ್ವೀಟ್ ಮಾಡಿದ ಅಕ್ಷಯ್ ಕುಮಾರ್, ರೈತರು ನಮ್ಮ ದೇಶದ ಪ್ರಧಾನ ಘಟಕವಾಗಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ತಾರತಮ್ಯ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಕಡೆ ಗಮನ ಹರಿಸುವ ಬದಲು ಸೌಹಾರ್ದಯುತ ವಾತಾವರಣ ಸೃಷ್ಟಿಸೋಣ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಕರಣ್ ಜೋಹರ್ ಟ್ವೀಟ್
ನಾವು ಪ್ರಕ್ಷುಬ್ಧ ಕಾಲದಲ್ಲಿ ವಾಸಿಸುತ್ತೇವೆ ಮತ್ತು ಪ್ರತಿ ತಿರುವಿನಲ್ಲಿಯೂ ವಿವೇಕ ಮತ್ತು ತಾಳ್ಮೆ ಈಗಿನ ತುರ್ತು. ನಾವು ಒಟ್ಟಾಗಿ,  ಪರಿಹಾರಗಳನ್ನು ಕಂಡುಹಿಡಿಯಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡೋಣ – ನಮ್ಮ ರೈತರು ಭಾರತದ ಬೆನ್ನೆಲುಬು. ಯಾರೂ ನಮ್ಮನ್ನು ವಿಭಜಿಸಲು ಬಿಡಬಾರದು ಎಂದು ಕರಣ್ ಜೋಹರ್ ಹೇಳಿದ್ದಾರೆ.

ಸಚಿನ್ ತೆಂಡುಲ್ಕರ್ ಪ್ರತಿಕ್ರಿಯೆ
ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಲು ಆಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತಕ್ಕಾಗಿ ಅವರೇ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಒಂದು ರಾಷ್ಟ್ರವಾಗಿ ಉಳಿಯೋಣ ಎಂದು ಹಿರಿಯ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಕೇಂದ್ರ ಸಚಿವ  ಹರ್​ದೀಪ್ ಸಿಂಗ್ ಪುರಿ ಟ್ವೀಟ್
ಕೃಷಿ ಕಾನೂನಿಗೆ ಮಸಿಬಳಿಯಲು ಮತ್ತು ಸಂಧಾನದ ಹಳಿ ತಪ್ಪಿಸಲು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಮಾಹಿತಿ ಹರಡಲು ಬಳಸುವ ಉಪಕರಣಗಳಲ್ಲಿ ಸುಳ್ಳೂ ಒಂದು. ಈ ಕಾನೂನುಗಳು ಚರ್ಚೆಗೊಳಪಟ್ಟಿಲ್ಲ ಎಂಬುದು ಇದೇ ರೀತಿಯ ಸುಳ್ಳು ಎಂದು ಕೇಂದ್ರ ಸಚಿವ ಹರ್​ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಸುರೇಶ್ ರೈನಾ ಟ್ವೀಟ್ 
ಒಂದು ದೇಶವಾಗಿ ನಾವು ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಇಂದು ನಮ್ಮೆದುರು ಇವೆ, ನಾಳೆಯೂ ಇರುತ್ತವೆ. ಇದರರ್ಥ ನಮ್ಮಲ್ಲಿ ಒಡಕು ಮೂಡಿದೆ ಅಥವಾ ಬಾಹ್ಯಶಕ್ತಿಗಳಿಂದ ನಾವು ಕೆರಳುತ್ತೇವೆ ಎಂದಲ್ಲ. ಎಲ್ಲವನ್ನೂ ನಾವು ಸೂಕ್ತ ಮತ್ತು ನಿಷ್ಪಕ್ಷಪಾತ ಮಾತುಕತೆಯಿಂದ ಪರಿಹರಿಸಬಹುದು ಎಂದು ಕ್ರಿಕೆಟ್ ಆಟಗಾರ ಸುರೇಶ್​ ರೈನಾ ಹೇಳಿದ್ದಾರೆ.

 

ಟ್ವೀಟ್ ವಾರ್: ದಿಲ್ಜಿತ್ ಹಾಡು ರಿಹಾನ್ನಾಗೆ ಅರ್ಪಣೆ, ದೇಶಪ್ರೇಮ ಸಾಬೀತಿಗೆ ಕಂಗನಾ ಸವಾಲು

Published On - 10:10 pm, Wed, 3 February 21