
ಮುಂಬೈ, ನವೆಂಬರ್ 18: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಮಾಡಲಾಗಿರುವ ಉಲ್ಲೇಖಗಳ ವಿರುದ್ಧ ಇಂದು ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದ್ದು, ಈ ಪುಸ್ತಕವನ್ನು ನಿಷೇಧಿಸುವಂತೆ ಶಿವಸೇನೆ ಆಗ್ರಹಿಸಿದೆ. ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆಯ ಹಲವು ನಾಯಕರು, ವೀರ ಸಾವರ್ಕರ್ ಅವರಿಗೆ ಮಾಡಲಾಗಿರುವ ಅವಮಾನದ ಕುರಿತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮೌನವನ್ನೂ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ, ಬದಲಾಗಿ ಕಾಂಗ್ರೆಸ್‌ನಿಂದ ಆ ಪುಸ್ತಕವನ್ನು ಸ್ವೀಕರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ವಿವಾದಕ್ಕೆ ಕಾರಣವೇನು?:
ವೀರ ಸಾವರ್ಕರ್ ಬ್ರಿಟಿಷರ ಕ್ಷಮೆ ಯಾಚಿಸಿದ್ದರು ಮತ್ತು ಅವರಿಗೆ ಪತ್ರಗಳನ್ನು ಬರೆದಿದ್ದರು ಎಂದು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಬರೆಯುವ ಮೂಲಕ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಶಿವಸೇನೆ ನಾಯಕರು ಆರೋಪಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಇದೇ ಆರೋಪವನ್ನು ಪದೇ ಪದೇ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ತಮ್ಮ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಸಾವರ್ಕರ್ ಅವರನ್ನು ಟೀಕಿಸಿದ್ದು, ವೀರ ಸಾವರ್ಕರ್ ತಮ್ಮ ವಸಾಹತುಶಾಹಿ ಒಡೆಯರಾಗಿದ್ದ ಬ್ರಿಟಿಷರಿಗೆ ಕ್ಷಮೆಯಾಚಿಸಿದ್ದರು ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ, ಕಾಂಗ್ರೆಸ್ ನಾಯಕರು ಬ್ರಿಟಿಷರ ಕೈಯಲ್ಲಿ ಹಲ್ಲೆ ಮತ್ತು ಸೆರೆವಾಸವನ್ನು ಸಹಿಸಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನನ್ನ ಕುಟುಂಬದ ಕುರಿತ ಸುಳ್ಳು ಸಂಗತಿಗಳಿಂದ ನೋವಾಗಿತ್ತು’; ಆತ್ಮಕತೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ
“ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಆಳ್ವಿಕೆಗಾರರ ಕೈಯಲ್ಲಿ ಹಲ್ಲೆ ಮತ್ತು ಸೆರೆವಾಸವನ್ನು ಅನುಭವಿಸುತ್ತಿದ್ದಾಗ, ವಿನಾಯಕ ದಾಮೋದರ ಸಾವರ್ಕರ್ ಅವರಂತಹ ಆರ್‌ಎಸ್‌ಎಸ್‌ನ ಹಿರಿಯ ಸಿದ್ಧಾಂತವಾದಿಗಳು ತಮ್ಮ ವಸಾಹತುಶಾಹಿ ಒಡೆಯರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುತ್ತಿದ್ದರು ಮತ್ತು ಅವರ ಸದಸ್ಯರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಮಾಹಿತಿದಾರರಾಗಿ ಶಾಮೀಲಾಗಿದ್ದರು” ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಬರೆದಿದ್ದಾರೆ.
“ಇತರ ಧರ್ಮಗಳ ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮೂಲಕ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ತನ್ನ ಯೋಜನೆಗೆ ಕಾಂಗ್ರೆಸ್ ಮತ್ತು ಅದರ ಮೌಲ್ಯಗಳೇ ಪ್ರಮುಖ ಅಡ್ಡಿಯಾಗಿವೆ ಎಂದು ಆರ್‌ಎಸ್‌ಎಸ್ ಯಾವಾಗಲೂ ಭಾವಿಸಿತ್ತು. ಅವರ ಮುಖ್ಯ ಸಿದ್ಧಾಂತವಾದಿಗಳು ತಮ್ಮ ಬರಹಗಳು ಮತ್ತು ಭಾಷಣಗಳಲ್ಲಿ ಹಿಟ್ಲರ್ ಮತ್ತು ಅಲ್ಪಸಂಖ್ಯಾತರ ಕುರಿತಾದ ಆತನ ನೀತಿಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು” ಎಂದೂ ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?
ಆತ್ಮಚರಿತ್ರೆಯನ್ನು ನಿಷೇಧಿಸುವಂತೆ ಶಿವಸೇನೆ ಆಗ್ರಹ:
ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಳಗೊಂಡಿರುವ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರವು ಈ ಪುಸ್ತಕವನ್ನು ನಿಷೇಧಿಸಬೇಕು ಎಂದು ಶಿವಸೇನೆ ನಾಯಕರು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಸೇನೆ ವಕ್ತಾರ ಸಂಜಯ್ ನಿರುಪಮ್, “ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಬರೆದಿರುವ ವಿಷಯಗಳು ಪ್ರೀತಿಯ ಪಯಣವಲ್ಲ, ಅದು ದ್ವೇಷದ ಪಯಣವಾಗಿದೆ. ಇಡೀ ಮಹಾರಾಷ್ಟ್ರ ದೇವರಂತೆ ಪೂಜಿಸುವ ಭಾರತದ ಶ್ರೇಷ್ಠ ಕ್ರಾಂತಿಕಾರಿ ಮತ್ತು ಮಹಾರಾಷ್ಟ್ರದ ಹೆಮ್ಮೆಯ ಪುತ್ರ ವೀರ ಸಾವರ್ಕರ್ ಅವರ ಬಗ್ಗೆ ಅವರು ನಿರಂತರವಾಗಿ ದ್ವೇಷದ ಭಾವನೆಯನ್ನು ಹೊಂದಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ನಾಯಕರು ಖಂಡಿತವಾಗಿಯೂ ತಮ್ಮ ಮನಸಿನಲ್ಲಿ ಹಿಂದೂಗಳ ಬಗ್ಗೆ ದ್ವೇಷವನ್ನು ಹೊಂದಿದ್ದಾರೆ; ಇದೇ ಪುಸ್ತಕದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ತಮ್ಮ ಕಣ್ಣುಗಳಲ್ಲಿ ಹೇಗೆ ನೀರು ಬಂತು ಎಂಬುದರ ಬಗ್ಗೆಯೂ ಅವರು ಬರೆದಿದ್ದಾರೆ. ಆದರೆ, ಅಲ್ಲಿ ಮಸೀದಿ ನಿರ್ಮಿಸಲು ಭಗವಾನ್ ರಾಮನ ಮಂದಿರವನ್ನು ಕೆಡವಿದ ಘಟನೆಯು ಅವರಿಗೆ ಯಾವುದೇ ದುಃಖವನ್ನುಂಟು ಮಾಡಲಿಲ್ಲ” ಎಂದು ನಿರುಪಮ್ ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ