ವೆಚ್ಚ ತೂಗಿಸಿಕೊಳ್ಳಲು ಖಾಸಗಿ ಮಾರುಕಟ್ಟೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ದರ ಹೆಚ್ಚು ಮಾಡುವುದು ಅನಿವಾರ್ಯ: ಭಾರತ್ ಬಯೋಟೆಕ್​

| Updated By: Lakshmi Hegde

Updated on: Jun 15, 2021 | 4:44 PM

ಕೊರೊನಾ ಲಸಿಕೆ ಉಳಿದ ಔಷಧಗಳಂತಲ್ಲ. ಇದನ್ನು ಕೇಂದ್ರ ಸರ್ಕಾರ ಉಚಿತವಾಗಿಯೇ ನೀಡುತ್ತಿದೆ. ಹೀಗಿರುವಾಗ ನಾಗರಿಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವುದು ಒಂದು ಆಯ್ಕೆಯೇ ಹೊರತು, ಕಡ್ಡಾಯವಲ್ಲ ಎಂದು ಭಾರತ್​ ಬಯೋಟೆಕ್​ ಹೇಳಿದೆ.

ವೆಚ್ಚ ತೂಗಿಸಿಕೊಳ್ಳಲು ಖಾಸಗಿ ಮಾರುಕಟ್ಟೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ದರ ಹೆಚ್ಚು ಮಾಡುವುದು ಅನಿವಾರ್ಯ: ಭಾರತ್ ಬಯೋಟೆಕ್​
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್​: ಕೊವ್ಯಾಕ್ಸಿನ್​ ಲಸಿಕೆ ಉತ್ಪಾದಕ ಕಂಪನಿ ಭಾರತ್​ ಬಯೋಟೆಕ್​ ಇದೀಗ ಲಸಿಕೆಗೆ ನಿಗದಿಪಡಿಸಲಾದ ಬೆಲೆಯ ಬಗ್ಗೆ ಸಣ್ಣಮಟ್ಟದಲ್ಲಿ ಬೇಸರ ಹೊರಹಾಕಿದೆ. ಕೊವ್ಯಾಕ್ಸಿನ್​ ಲಸಿಕೆಯ ಒಂದು ಡೋಸ್​​ನ್ನು ಕೇವಲ 150 ರೂ.ಗೆ ಕೇಂದ್ರ ಸರ್ಕಾರಕ್ಕೆ ದೀರ್ಘಾವಧಿಯವರೆಗೆ ಪೂರೈಕೆ ಮಾಡುವುದು ಕಷ್ಟ. ಇದು ಸ್ಪರ್ಧಾತ್ಮಕ ಬೆಲೆಯಲ್ಲ ಮತ್ತು ಸುಸ್ಥಿರ ದರವೂ ಅಲ್ಲ. ಹಾಗಾಗಿ ಲಸಿಕೆ ತಯಾರಿಕಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಖಾಸಗಿ ಮಾರುಕಟ್ಟೆಯಲ್ಲಾದರೂ ಬೆಲೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಭಾರತ್​ ಬಯೋಟೆಕ್​, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಇದುವರೆಗೆ ಉತ್ಪಾದನೆ ಮಾಡಲಾದ ಕೊವ್ಯಾಕ್ಸಿನ್​ ಲಸಿಕೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಪ್ರಮಾಣವನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಹಾಗೇ, ಉಳಿದ ಹೆಚ್ಚಿನ ಪಾಲನ್ನು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸರಬರಾಜು ಮಾಡಿದ್ದೇವೆ. ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಿದ್ದರೂ ಕಂಪನಿ ಒಂದು ಡೋಸ್​ಗೆ 250ರೂ.ಗಿಂತಲೂ ಕಡಿಮೆ ದರವನ್ನೇ ವಸೂಲಿ ಮಾಡಿದೆ. ಮುಂಬರುವ ದಿನಗಳಲ್ಲಿ ಶೇ.75ರಷ್ಟು ಡೋಸ್​ನ್ನು ಸರ್ಕಾರಗಳಿಗೆ ಪೂರೈಸುತ್ತೇವೆ. ಉಳಿದ 25 ರಷ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಕೊರೊನಾ ಲಸಿಕೆ ಉಳಿದ ಔಷಧಗಳಂತಲ್ಲ. ಇದನ್ನು ಕೇಂದ್ರ ಸರ್ಕಾರ ಉಚಿತವಾಗಿಯೇ ನೀಡುತ್ತಿದೆ. ಹೀಗಿರುವಾಗ ನಾಗರಿಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವುದು ಒಂದು ಆಯ್ಕೆಯೇ ಹೊರತು, ಕಡ್ಡಾಯವಲ್ಲ. ಹಣವಿದ್ದವರು ತಮ್ಮ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು ಎಂದು ಹೇಳಿರುವ ಭಾರತ್​ ಬಯೋಟೆಕ್​, ನಮ್ಮ ಸಂಸ್ಥೆಯಲ್ಲಿ ಕೊರೊನಾ ರೂಪಾಂತರಿ ವೈರಸ್​ಗಳ ವಿರುದ್ಧ ಹೋರಾಡುವ ಲಸಿಕೆಗಳ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಹೀಗಾದಾಗ ಸಹಜವಾಗಿ ಕೊವ್ಯಾಕ್ಸಿನ್ ಉತ್ಪಾದನೆ ಮೇಲೆ ಪ್ರಭಾವ ಬೀರುತ್ತದೆ. ಇದು ನಮಗೆ ನಷ್ಟ ಉಂಟು ಮಾಡುವ ಸಂಗತಿ. ಹಾಗಾಗಿ ಗಣನೀಯವಾಗಿ ಉತ್ಪಾದನಾ ವ್ಯವಸ್ಥೆ ಮಾಡಬೇಕು ಎಂದೂ ಹೇಳಿದೆ.

ಕೊವ್ಯಾಕ್ಸಿನ್​ ಲಸಿಕೆ ಅಭಿವೃದ್ಧಿ, ಕ್ಲಿನಿಕಲ್​ ಟ್ರಯಲ್​​ಗಳು ಮತ್ತು ಲಸಿಕೆ ತಯಾರಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಮ್ಮದೇ ಸಂಪನ್ಮೂಲಗಳಿಂದ 500 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದೇವೆ ಎಂದೂ ಭಾರತ್​ ಬಯೋಟೆಕ್​ ತಿಳಿಸಿದೆ.

ಇದನ್ನೂ ಓದಿ: Corona Vaccine: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಶೇಕಡಾ 100ರಷ್ಟು ಲಸಿಕೆ ನೀಡಿಕೆ ಸಾಧಿಸಿದ ಮೊದಲ ಗ್ರಾಮವಿದು!

Published On - 4:37 pm, Tue, 15 June 21