ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ನಿವಾಸದ ಹೊರಗೆ ಪ್ರತಿಭಟನೆ; ಸುಖ್ಬೀರ್ ಸಿಂಗ್ ಬಾದಲ್ ಪೊಲೀಸರ ವಶಕ್ಕೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 15, 2021 | 4:27 PM

Punjab: ಬಂಧನಕ್ಕೊಳಗಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶಿರೋಮಣಿ ಅಕಾಲಿ ದಳ (SAD) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್, "ಪ್ರತಿಭಟನೆ ತೀವ್ರವಾಗಿದೆ, ಕ್ಯಾಪ್ಟನ್​ಗೆ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ. 

ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ನಿವಾಸದ ಹೊರಗೆ ಪ್ರತಿಭಟನೆ; ಸುಖ್ಬೀರ್ ಸಿಂಗ್ ಬಾದಲ್ ಪೊಲೀಸರ ವಶಕ್ಕೆ
ಸುಖ್ಬೀರ್ ಸಿಂಗ್ ಬಾದಲ್ ಪೊಲೀಸರ ವಶಕ್ಕೆ (ಕೃಪೆ: ಬಾದಲ್ ಅವರ ಟ್ವೀಟ್)
Follow us on

ದೆಹಲಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರ ಪರಿಚಯಿಸಿದ ವಿವಿಧ ಯೋಜನೆಗಳಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಶಿರೋಮಣಿ ಅಕಾಲಿ ದಳ (SAD) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಮಂಗಳವಾರ ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಸ್ವಾನ್‌ನಲ್ಲಿರುವ ಮುಖ್ಯಮಂತ್ರಿಯ ನಿವಾಸದ ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಹಲವಾರು ಎಸ್‌ಎಡಿ ನಾಯಕರು ಪ್ರತಿಭಟನೆ ನಡೆಸಿದ ನಂತರ ಬಾದಲ್ ಅವರನ್ನು ವಶಕ್ಕೆ ಪಡೆಯಲಾಯಿತು.


ಬಂಧನಕ್ಕೊಳಗಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಬಾದಲ್, “ಪ್ರತಿಭಟನೆ ತೀವ್ರವಾಗಿದೆ, ಕ್ಯಾಪ್ಟನ್​ಗೆ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.

“ಪ್ರತಿಭಟನೆ ತೀವ್ರವಾದರೆ ಕ್ಯಾಪ್ಟನ್ ತನ್ನ ಎಲ್ಲಾ ಶಕ್ತಿಯನ್ನು ಬಳಸಿದರೂ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ವ್ಯಾಕ್ಸಿನೇಷನ್‌ನಲ್ಲಿ ಹಗರಣವಿದೆ, ಫತೇ ಕಿಟ್‌ನಲ್ಲಿ ಹಗರಣವಿದೆ, ಎಸ್‌ಸಿ ವಿದ್ಯಾರ್ಥಿವೇತನದಲ್ಲಿ ಹಗರಣವಿದೆ, ರೈತರ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ”ಎಂದು ಎಸ್‌ಎಡಿ ಮುಖ್ಯಸ್ಥರು ಹೇಳಿರುವುದಾಗ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.


ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಭದ್ರತಾ ಪಡೆಗಳು ಪ್ರತಿಭಟನಾ ನಿರತ ಅಕಾಲಿ ದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಜಲ ಫಿರಂಗಿಗಳನ್ನು ಬಳಸಿ ಗುಂಪನ್ನು ಚದುರಿಸಿದರು.  ಪ್ರತಿಭಟನಾಕಾರರು ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ದೂಡಿ ಮುಂದೆಬಂದಿದ್ದು ಅನೇಕರು ಪಕ್ಷದ ಧ್ವಜಗಳನ್ನು ಹೊತ್ತುಕೊಂಡು ಹತ್ತಿದ್ದರು.

ವ್ಯಾಕ್ಸಿನೇಷನ್ ಮತ್ತು ಕೊವಿಡ್ -19 ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷವು ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲಿ ಈ ಪ್ರತಿಭಟನೆ ನಡೆದಿದೆ.

ಶನಿವಾರ, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೈತ್ರಿ ಮಾಡಿಕೊಂಡವು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಮೈತ್ರಿಯನ್ನು ಪಂಜಾಬ್ ನಲ್ಲಿ ಪ್ರಗತಿ ಮತ್ತು ಸಮೃದ್ಧಿಗೆ ಕಾರಣವಾಗುವ “ಹೊಸ ರಾಜಕೀಯ ಮತ್ತು ಸಾಮಾಜಿಕ ಉಪಕ್ರಮ” ಎಂದು ಕರೆದರೆ, ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಇದನ್ನು ರಾಜ್ಯ ರಾಜಕೀಯದಲ್ಲಿ “ಹೊಸ ದಿನ” ಎಂದು ಬಣ್ಣಿಸಿದರು. 1996 ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ 13 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದಿದ್ದು 25 ವರ್ಷಗಳ ನಂತರ ಉಭಯ ಪಕ್ಷಗಳು ಕೈಜೋಡಿಸಿವೆ.

ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಭುಗಿಲೆದ್ದ ಅಸಮಾಧಾನ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ

(Shiromani Akali Dal president Sukhbir Singh Badal detained by Punjab Police during a protest outside CM Amarinder Singh’s residence)