ದೆಹಲಿ ಜುಲೈ 18: ಕೆಲವರು ಸೂಪರ್‌ಮ್ಯಾನ್ ಆಗಲು ಬಯಸುತ್ತಾರೆ, ನಂತರ ‘ಭಗವಾನ್’ (ದೇವರು) ಆಗಲು ಬಯಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಗುರುವಾರ ಹೇಳಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಲಿನ ಪರೋಕ್ಷ ದಾಳಿ ಎಂದು ಕಾಂಗ್ರೆಸ್ ಪರಿಗಣಿಸಿದೆ.
ಜಾರ್ಖಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, “ಪ್ರಗತಿಗೆ ಅಂತ್ಯವಿಲ್ಲ. ಜನರು ಸೂಪರ್‌ಮ್ಯಾನ್ ಆಗಲು ಬಯಸುತ್ತಾರೆ, ಆದರೆ ಅವರು ಅಲ್ಲಿಗೆ ನಿಲ್ಲುವುದಿಲ್ಲ, ನಂತರ ಅವರು ‘ದೇವತಾ’, ಆಗಲು ಅಲ್ಲಿಂದ ‘ಭಗವಾನ್’ ಆಗಲು ಬಯಸುತ್ತಾರೆ. ‘ಭಗವಾನ್ ತಾನು’ ‘ವಿಶ್ವರೂಪ’ ಎಂದು ಹೇಳುತ್ತಾನೆ. ಅದಕ್ಕಿಂತ ದೊಡ್ಡದು ಏನಾದರೂ ಇದೆಯೇ ಎಂದು ಯಾರಿಗೂ ತಿಳಿದಿಲ್ಲ ಎಂದಿದ್ದಾರೆ.
ಜಾರ್ಖಂಡ್‌ನ ಬಿಷ್ಣುಪುರ್‌ನಲ್ಲಿ ಲಾಭೋದ್ದೇಶವಿಲ್ಲದ ಸಂಘಟನೆಯಾದ ವಿಕಾಸ್ ಭಾರತಿ ಆಯೋಜಿಸಿದ್ದ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಆರ್‌ಎಸ್‌ಎಸ್ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ.
ಅಭಿವೃದ್ಧಿಗೆ ಅಂತ್ಯವಿಲ್ಲ. ಹೆಚ್ಚಿನದಕ್ಕೆ ಯಾವಾಗಲೂ ಅವಕಾಶವಿದೆ ಎಂದು ಯೋಚಿಸಬೇಕು. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು.ಯಾವಾಗಲೂ ಹೆಚ್ಚಿನದಕ್ಕಾಗಿ ಶ್ರಮಿಸಬೇಕು, ”ಎಂದು ಕಾರ್ಯಕರ್ತರ ಜತೆ ನಡೆಸಿದ ಸಂವಾದದಲ್ಲಿ ಭಾಗವತ್ ಹೇಳಿದ್ದಾರೆ.
ಭಾಗವತ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಸ್ವಯಂ ಘೋಷಿತ ನಾನ್-ಬಯಾಲಾಜಿಕಲ್ ಪ್ರಧಾನಿಗೆ ಜಾರ್ಖಂಡ್‌ನಿಂದ ಲೋಕ ಕಲ್ಯಾಣ ಮಾರ್ಗವನ್ನು ಗುರಿಯಾಗಿಸಿಕೊಂಡು ನಾಗ್ಪುರದಿಂದ ಉಡಾವಣೆಯಾದ ಈ ಇತ್ತೀಚಿನ ಅಗ್ನಿ ಕ್ಷಿಪಣಿಯ ಸುದ್ದಿ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಮತ್ತು ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖ್ಯಸ್ಥರ ವಿಮರ್ಶಾತ್ಮಕ ಉಲ್ಲೇಖಗಳ ಕುರಿತು ರಾಜಕೀಯ ವಿವಾದ ಭುಗಿಲೆದ್ದ ಕೆಲವು ದಿನಗಳ ನಂತರ ಇದು ಬಂದಿದೆ.
ಇದನ್ನೂ ಓದಿ: ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪಿಎಂ ಮೋದಿ ಹೊಣೆ ಹೊರಬೇಕು: ಖರ್ಗೆ
ಕಳೆದ ತಿಂಗಳು, ಭಾಗವತ್ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಲಹ ಪೀಡಿತ ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದು ಹೇಳಿದರು. ಆರ್‌ಎಸ್‌ಎಸ್ ಮುಖ್ಯಸ್ಥರು ಚುನಾವಣಾ ಸಮಯದಲ್ಲಿ ಸಾಮಾನ್ಯ ಭಾಷಣವನ್ನು ಟೀಕಿಸಿದ್ದು, ಚುನಾವಣೆಗಳು ಮುಗಿದ ನಂತರ ಮತ್ತು ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಏನು ಮತ್ತು ಹೇಗೆ ಎಂಬುದರ ಕುರಿತು ಅನಗತ್ಯ ಮಾತುಕತೆಗಳ ಬದಲಿಗೆ ಹೊಸ ಕೆಲಸದತ್ತ ಗಮನ ಹರಿಸುವಂತೆ ಕರೆ ನೀಡಿದ್ದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳನ್ನು ಗಳಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ