ಪ್ರಧಾನಿ ಮೋದಿ- ಪುಟಿನ್ ಗೆಳೆತನ 25 ವರ್ಷಕ್ಕೂ ಹಿಂದಿನದು; ವಾಜಪೇಯಿ ಜೊತೆಗಿನ ಫೋಟೋ ಮತ್ತೆ ವೈರಲ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 4 ವರ್ಷಗಳ ಬಳಿಕ ಇದೀಗ ಮತ್ತೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಸಂಜೆ ಅವರು ದೆಹಲಿಗೆ ಬಂದಿಳಿಯಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸಂಜೆ 6.30ಕ್ಕೆ ನವದೆಹಲಿಗೆ ಆಗಮಿಸಲಿದ್ದಾರೆ. ಇದು ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರದ ಅವರ ಮೊದಲ ಭಾರತ ಭೇಟಿಯಾಗಿದೆ. ಮೋದಿ ಹಾಗೂ ಪುಟಿನ್ ನಡುವಿನ ಉತ್ತಮ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ, ಈ ಸ್ನೇಹ ಮೋದಿ ಪ್ರಧಾನಿಯಾದ ಬಳಿಕ ಶುರುವಾಗಿದ್ದಲ್ಲ; ಈ ಗೆಳೆತನಕ್ಕೆ 25ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.

ನವದೆಹಲಿ, ಡಿಸೆಂಬರ್ 4: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Putin) ಇಂದು ಸಂಜೆ 6.30ಕ್ಕೆ ಭಾರತಕ್ಕೆ ಆಗಮಿಸಲಿದ್ದಾರೆ. ಅವರನ್ನು ಸ್ವಾಗತಿಸಲು ದೆಹಲಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಅಂದಹಾಗೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸ್ನೇಹ ಸಂಬಂಧ ಶುರುವಾಯಿತು ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಅವರಿಬ್ಬರ ಗೆಳೆತನಕ್ಕೆ 25 ವರ್ಷಗಳ ಹಿನ್ನೆಲೆಯಿದೆ. ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೇ ಅವರು ಪುಟಿನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಇಂದು ಅವರು ದೆಹಲಿಗೆ ಭೇಟಿ ನೀಡುತ್ತಿರುವುದರಿಂದ ಅವರ ಹಾಗೂ ಪುಟಿನ್ ಅವರ 25 ವರ್ಷಗಳ ಹಿಂದಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಹುನಿರೀಕ್ಷಿತ ಭೇಟಿಯು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅವರ ದೀರ್ಘಕಾಲದ ಸ್ನೇಹವನ್ನು ನೆನಪಿಸುತ್ತಿದೆ. 2001ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗೆ ರಷ್ಯಾದ ಮಾಸ್ಕೋಗೆ ತೆರಳಿದ್ದರು. ಪ್ರಧಾನಿ ವಾಜಪೇಯಿ ಜೊತೆಗೆ ತೆರಳಿದ್ದ ನಿಯೋಗದಲ್ಲಿ ಮೋದಿ ಕೂಡ ಇದ್ದರು ಎಂಬುದು ವಿಶೇಷ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಪುಟಿನ್ ತಂಗಲಿರುವ ಹೋಟೆಲ್ ರೂಂ ಬಾಡಿಗೆ ಕೇಳಿದರೆ ಶಾಕ್ ಆಗುತ್ತೀರಿ!
ಆಗ ನರೇಂದ್ರ ಮೋದಿಯವರು ವಾಜಪೇಯಿ ಹಾಗೂ ಪುಟಿನ್ ಅವರ ಹಿಂಭಾಗದಲ್ಲಿ ನಿಂತಿದ್ದರು. ಇದೀಗ ಅವರು ಪ್ರಧಾನಿಯಾಗಿ ಪುಟಿನ್ ಅವರಿಗೆ ಸಮಾನ ಸ್ಥಾನದಲ್ಲಿದ್ದಾರೆ ಎಂಬುದಷ್ಟೇ ವ್ಯತ್ಯಾಸ.

2021ರ ಬಳಿಕ ಮೊದಲ ಬಾರಿಗೆ ಪುಟಿನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್ 1ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆದ SCO ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರು ಕೊನೆಯ ಬಾರಿಗೆ ವೈಯಕ್ತಿಕವಾಗಿ ಭೇಟಿಯಾದರು. ಆ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ರಷ್ಯಾದ ಅಧ್ಯಕ್ಷರ ಕಾರಿನಲ್ಲಿಯೇ ಪ್ರಯಾಣಿಸಿದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು ಮತ್ತು ಅವರಿಬ್ಬರ ಸ್ನೇಹ ಸಂಬಂಧದ ಬಗ್ಗೆ ಅಮೆರಿಕದ ಅಧ್ಯಕ್ಷರ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




