Sabarimala Makara Jyothi: ಅಯ್ಯಪ್ಪಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ

ದೀಪಾರಾಧನೆಯ ನಂತರ 6:30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಸಾವಿರಾರು ಮಂದಿ ಕಾಯುತ್ತಿರುವಾಗಲೇ ಪೊನ್ನಂಬಲಮೇಡದಲ್ಲಿ ಮಕರಜ್ಯೋತಿ ಬೆಳಗಿತು. ಭಕ್ತರು ಮಕರಜ್ಯೋತಿಯನ್ನು ಮೂರು ಬಾರಿ ನೋಡಿದರು. ಎಲ್ಲೆಡೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆ ಮೊಳಗಿತು

Sabarimala Makara Jyothi: ಅಯ್ಯಪ್ಪಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ
ಮಕರ ಜ್ಯೋತಿ

Updated on: Jan 15, 2024 | 7:23 PM

ಶಬರಿಮಲೆ ಜನವರಿ 15 : ಶಬರಿಮಲೆಯಲ್ಲಿ (Sabarimala) ಸನ್ನಿಧಾನಂ ಮತ್ತು ಇತರ ವೀಕ್ಷಣಾ ಸ್ಥಳಗಳು ಸೇರಿದಂತೆ ಸಾವಿರಾರು ಅಯ್ಯಪ್ಪ ಭಕ್ತರು ಮಕರಜ್ಯೋತಿಯನ್ನು (Makarajyothi) ವೀಕ್ಷಿಸಿದರು. ಮಕರ ಜ್ಯೋತಿ ಕಾಣುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ (Swamiye Saranamayappa)ಎಂದು ಕೂಗಿ ಜ್ಯೋತಿಯ ದರ್ಶನ ಪಡೆದರು.  ದೀಪಾರಾಧನೆಯ ನಂತರ 6:30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಸಾವಿರಾರು ಮಂದಿ ಕಾಯುತ್ತಿರುವಾಗಲೇ ಪೊನ್ನಂಬಲಮೇಡದಲ್ಲಿ ಮಕರಜ್ಯೋತಿ ಬೆಳಗಿತು. ಭಕ್ತರು ಮಕರಜ್ಯೋತಿಯನ್ನು ಮೂರು ಬಾರಿ ನೋಡಿದರು.

ಸೋಮವಾರ ಸಂಜೆ 5 ಗಂಟೆಗೆ ಗರ್ಭಗುಡಿ ತೆರೆಯಲಾಯಿತು. ಪಂದಳಂನಿಂದ ಆರಂಭವಾದ ತಿರುವಾಭರಣ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಶರಂಕುತ್ತಿಯಲ್ಲಿ ಬರಮಾಡಿಕೊಂಡರು. ಅಯ್ಯಪ್ಪನಿಗೆ ತೊಡುವ ತಿರುವಾಭರಣವನ್ನು ದೇವಸ್ವಂ ಅಧಿಕಾರಿಗಳು ಸ್ವೀಕರಿಸಿದ ನಂತರ ಮೆರವಣಿಗೆಯು ಸನ್ನಿಧಾನಕ್ಕೆ ತೆರಳಿತು. 18ನೇ ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ಬಳಿಕ ತಂತ್ರಿ ಮತ್ತು ಮೇಲ್ಶಾಂತಿ (ಪುರೋಹಿತರು) ಸೇರಿ ತಿರುವಾಭರಣವನ್ನು ಸ್ವೀಕರಿಸಿ ಅಯ್ಯಪ್ಪ ಮೂರ್ತಿಗೆ ತೊಡಿಸುತ್ತಾರೆ. ನಂತರ ದೀಪಾರಾಧನೆ ನಡೆಯಿತು.

ಎಲ್ಲೆಡೆ ಅಯ್ಯಪ್ಪ ಭಕ್ತರ ದಂಡು ನೆರೆದಿತ್ತು. ವೀಕ್ಷಣೆಗಾಗಿ ವೀಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಂಟು ಡಿವೈಎಸ್ಪಿಗಳ ನೇತೃತ್ವದಲ್ಲಿ 1400 ಸಿಬ್ಬಂದಿಯನ್ನು ಪತ್ತನಂತಿಟ್ಟ ಜಿಲ್ಲೆಯ ವಿವಿಧೆಡೆ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪೊಲೀಸರು ಡ್ರೋನ್ ಕಣ್ಗಾವಲು ಮೂಲಕ ಭದ್ರತೆಯನ್ನು ಖಾತ್ರಿಪಡಿಸುತ್ತಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.


ತಿರುವಾಭರಣಂ ತೊಟ್ಟ ನಂತರ 18ನೇ ತಾರೀಖಿನವರೆಗೆ ಅಯ್ಯಪ್ಪನ ದರ್ಶನ ಪಡೆಯಬಹುದು. 19ರವರೆಗೆ ತುಪ್ಪದ ಅಭಿಷೇಕ ನಡೆಯಲಿದೆ.. 19ರಂದು ಮಣಿ ಮಂಟಪದಿಂದ ಶರಂಕುತ್ತಿವರೆಗೆ ಮೆರವಣಿಗೆ ನಡೆಯಲಿದೆ. 20ರಂದು ರಾತ್ರಿ 10 ಗಂಟೆಗೆ ಮಾಳಿಕಪ್ಪುರಂನಲ್ಲಿ ಗುರುತಿ (ಬಲಿವಾಡು) ನಡೆಯಲಿದೆ.

ಇದನ್ನೂ ಓದಿ: ಶಬರಿಮಲೆ ದೇಗುಲದಲ್ಲಿ ಸಂಚಲನ: ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ ನಿಶಾ

20ರ ರಾತ್ರಿಯವರೆಗೆ ದರ್ಶನವಿರುತ್ತದೆ. 21ರಂದು ಬೆಳಗ್ಗೆ ತಿರುವಾಭರಣ ಪಂದಳಂಗೆ  ವಾಪಸ್ ಹೋಗುತ್ತದೆ. ಬಳಿಕ ಅಯ್ಯಪ್ಪ ಮೂರ್ತಿಗೆ ಭಸ್ಮಾಭಿಷೇಕ ಮಾಡಿ ಯೋಗದಂ ಮತ್ತು ರುದ್ರಾಕ್ಷಮಾಲೆ ಧರಿಸಿ ಗರ್ಭಗುಡಿ ಮುಚ್ಚಲಾಗುತ್ತದೆ. ಈ ಹೊತ್ತಲ್ಲಿ ಭಗವಂತ ಯೋಗನಿದ್ರೆಗೆ ಜಾರುತ್ತಾನೆ ಎಂಬ ನಂಬಿಕೆ ಇಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ