ನವದೆಹಲಿ: ತಮ್ಮದೇ ಸಂಪುಟದ ಸಚಿವ ವಿಜಯ್ ಸಿಂಗ್ಲಾ (Vijay Singla) ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಮಂತ್ರಿ ಸ್ಥಾನದಿಂದ ವಜಾಗೊಳಿಸಿ, ಬಂಧಿಸಲು ಆದೇಶ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (CM Bhagwant Mann) ಇದೀಗ ಕಾಂಗ್ರೆಸ್ಗೆ ಶಾಕ್ ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಸಿದ್ಧರಾಗಿದ್ದೇವೆ ಎಂದು ಘೋಷಿಸಿದ್ದ ಸಿಎಂ ಭಗವಂತ್ ಮಾನ್ ಸರ್ಕಾರದ ನಡೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ (Sadhu Singh Dharamsot) ಅವರನ್ನು ಬಂಧಿಸಿದೆ.
ಇಂದು (ಮಂಗಳವಾರ) ಮುಂಜಾನೆ ಸಾಧು ಸಿಂಗ್ ಧರಮ್‌ಸೋತ್ ಅವರ ಬಂಧನವಾಗಿದೆ. ಇವರು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತ ಕಮಲ್ಜಿತ್ ಸಿಂಗ್ ಅವರನ್ನೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಲಾಗಿದೆ.
ಒಂದು ತಿಂಗಳ ಹಿಂದಷ್ಟೇ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಕಾಂಗ್ರೆಸ್ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ದಿಢೀರನೆ ಮಾಜಿ ಸಚಿವ ಸಾಧು ಸಿಂಗ್ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಆಮ್ ಆದ್ಮಿ ಸರ್ಕಾರ ಪಂಜಾಬ್ನಲ್ಲಿ ಕಾಂಗ್ರೆಸ್ ನಾಯಕರಿಗೂ ಬಿಸಿ ಮುಟ್ಟಿಸಿದೆ.
ಇದನ್ನೂ ಓದಿ: Vijay Singla: ಭ್ರಷ್ಟಾಚಾರ ಪ್ರಕರಣ; ಪಂಜಾಬ್ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನ ನ್ಯಾಯಾಂಗ ಬಂಧನ
ಈ ಮಾಹಿತಿಯನ್ನು ಖಚಿತಪಡಿಸಿದ ವಿಜಿಲೆನ್ಸ್ ಬ್ಯೂರೋ ಅಧಿಕಾರಿಯೊಬ್ಬರು, ಮಾಜಿ ಸಚಿವ ಮತ್ತು ಪರ್ತಕರ್ತನನ್ನು ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು. ಕಳೆದ ವಾರ ವಿಭಾಗೀಯ ಅರಣ್ಯ ಅಧಿಕಾರಿ ಗುರ್ನಮ್ಪ್ರೀತ್ ಸಿಂಗ್ ಮತ್ತು ಮತ್ತೋರ್ವ ವ್ಯಕ್ತಿ ಹರ್ಮಿಂದರ್ ಸಿಂಗ್ ಹುಮ್ಮಿ ಅವರನ್ನು ಬಂಧಿಸಿದಾಗ ಮಾಜಿ ಸಚಿವರ ವಿರುದ್ಧ ಬ್ಯೂರೋ ಅನೇಕ ಪುರಾವೆಗಳನ್ನು ಸಂಗ್ರಹಿಸಿತ್ತು. ಅವರು ಧರಂಸೋತ್ಗೆ ಭಾರೀ ಲಂಚವನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.
ಕಮಲ್ಜೀತ್ ಮೂಲಕ ಹಮ್ಮಿ ಧರಂಸೋತ್ಗೆ ಲಂಚ ನೀಡುತ್ತಿದ್ದರು. ಕ್ಯಾಪ್ಟನ್ ಅಮರಿಂದರ್ ಅವರ ಅಧಿಕಾರಾವಧಿಯಲ್ಲಿ ಐಎಎಸ್ ಅಧಿಕಾರಿ ಕಿರ್ಪಾ ಶಂಕರ್ ಸರೋಜ್ ಅವರು ಸ್ಕಾಲರ್‌ಶಿಪ್ ಹಗರಣದಲ್ಲಿ ಸಾಧು ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಆದರೆ, ಬಳಿಕ ಅವರಿಗೆ “ಕ್ಲೀನ್ ಚಿಟ್” ನೀಡಲಾಗಿತ್ತು. ಆದರೆ, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 am, Tue, 7 June 22