ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಾಂ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು..
Mulayam Singh Yadav: ಮುಲಾಯಾಂ ಸಿಂಗ್ ಯಾದವ್ ಕಳೆದ ಕೆಲವು ವರ್ಷಗಳಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದವರ್ಷವೂ ಕೂಡ ಅವರ ಯುರಿನರಿ ಟ್ರ್ಯಾಕ್ನಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ, ವರಿಷ್ಠ ಮುಲಾಯಾಂ ಸಿಂಗ್ ಯಾದವ್ ಇಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 81ವರ್ಷದ ಮುಲಾಯಾಂ ಸಿಂಗ್ ಯಾದವ್ ಕೆಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಗುರ್ಗಾಂವ್ನ ಮೇದಾಂತಾ ಆಸ್ಪತ್ರೆಗೆ ಅವರನ್ನು ಅಡ್ಮಿಟ್ ಮಾಡಲಾಗಿದೆ. ಆಸ್ಪತ್ರೆಯಿಂದ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿಲ್ಲ.
ಮುಲಾಯಾಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದು, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1996ರ ಜೂ.1ರಿಂದ 1998ರ ಮಾರ್ಚ್ 19ರವರೆಗೆ ಕೇಂದ್ರ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಲಾಯಾಂ ಸಿಂಗ್ ಯಾದವ್ ಕಳೆದ ಕೆಲವು ವರ್ಷಗಳಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದವರ್ಷವೂ ಕೂಡ ಅವರ ಯುರಿನರಿ ಟ್ರ್ಯಾಕ್ನಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಸ್ವಲ್ಪ ದಿನಗಳ ಬಳಿಕ ಹೊಟ್ಟೆ ಊದಿಕೊಂಡು, ನೋವಿನಿಂದ ಬಳಲುತ್ತಿದ್ದ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಮುಲಾಯಾಂ ಸಿಂಗ್ ಯಾದವ್ ದೊಡ್ಡ ಕರುಳಿನಲ್ಲಿ ಸಮಸ್ಯೆಯಿದೆ ಎಂದು ಆಗ ವೈದ್ಯರು ಹೇಳಿದ್ದರು. ಕೊಲೊನೊಸ್ಕೊಪಿ ಮೂಲಕ ಕರುಳನ್ನು ಸ್ವಚ್ಛಗೊಳಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ನಂತರ ಆರೋಗ್ಯದಲ್ಲಿ ಸುಧಾರಣೆಯೂ ಕಾಣಿಸಿತ್ತು. ಮುಲಾಯಾಂ ಸಿಂಗ್ ಯಾದವ್ ಆರೋಗ್ಯ ವಿಚಾರಿಸಲು ಸಮಾಜವಾದಿ ಪಕ್ಷದ ಗಣ್ಯರು ಮೇದಾಂತಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇವರ ಪುತ್ರ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸದ್ಯ ಮುಂದಿನ ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಇನ್ನು ಚುನಾವಣೆಯಲ್ಲಿ ಯಾವುದೇ ದೊಡ್ಡ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Jaggesh’s Son Car Accident: ನಟ ಜಗ್ಗೇಶ್ ಪುತ್ರ ಗುರುರಾಜ್ ಇದ್ದ ಕಾರು ಅಪಘಾತ; ಹೈದರಾಬಾದ್ ರಸ್ತೆಯಲ್ಲಿ ಅವಘಡ
Samajwadi Party Founder Mulayam Singh Yadav Hospitalised In Gurgaon