ಯೋಗಿ ಆದಿತ್ಯನಾಥ್ ಭೇಟಿ ಕೊಟ್ಟ ಹೆಲಿಪ್ಯಾಡ್, ಆಸ್ಪತ್ರೆ, ಆಮ್ಲಜನಕ ಘಟಕಗಳ ಶುದ್ಧೀಕರಣ..
ನಾವು ಕೊರೊನಾ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಅದರ ಫಲವಾಗಿ ಉತ್ತರ ಪ್ರದೇಶದಲ್ಲಿ ಸದ್ಯ ಕೊರೊನಾದಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.93ರಷ್ಟಿದೆ. ಈ ಚೇತರಿಕೆ ಪ್ರಮಾಣದಲ್ಲಿ ನಮ್ಮ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ ಇದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಖನೌ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿದ್ದ ಸೈಫೈ ಹೆಲಿಪ್ಯಾಡ್ನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಗಂಗಾಜಲ ಹಾಕಿ ಶುದ್ಧೀಕರಿಸಿದ್ದಾರೆ. ಅಂದು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಕಚೇರಿಯನ್ನು ಬಿಟ್ಟುಕೊಟ್ಟಿದ್ದರು. ಯೋಗಿ ಆದಿತ್ಯನಾಥ್ ಆ ಕಚೇರಿಗೆ ಪ್ರವೇಶಿಸುವುದಕ್ಕೂ ಮೊದಲು ಅದನ್ನು ಗಂಗಾಜಲ ಹಾಕಿ ಶುದ್ಧೀಕರಿಸಲಾಗಿತ್ತು.
ಅಂದು ಯೋಗಿ ಆದಿತ್ಯನಾಥ್ ಮಾಡಿಸಿದ ಕೆಲಸಕ್ಕೆ ಪ್ರತೀಕಾರವಾಗಿ ಇದೀಗ ಅವರು ಭೇಟಿ ಕೊಟ್ಟ ಸೈಫೈ ಹೆಲಿಪ್ಯಾಡ್ನ್ನು ಶುದ್ಧೀಕರಿಸುತ್ತಿದ್ದೇವೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಇನ್ನು ಸೈಫೈ ಹೆಲಿಪ್ಯಾಡ್ ಮಾತ್ರವಲ್ಲ, ಸೈಫೈ ಆಸ್ಪತ್ರೆ, ಆಮ್ಲಜನಕ ಘಟಕ ಸೇರಿ, ಅವರು ಎಲ್ಲೆಲ್ಲೆ ಹೋಗಿದ್ದರೋ ಅಲ್ಲೆಲ್ಲ ಶುದ್ಧೀಕರಣ ಮಾಡಿದ್ದೇವೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಇಟಾವಾ ಜಿಲ್ಲೆಯ ಸೈಫೈನಲ್ಲಿ ಸಮಾಜವಾದಿ ಪಕ್ಷದ ಬಾಹುಳ್ಯ ಹೆಚ್ಚಾಗಿದೆ. ಶನಿವಾರ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ಕೊವಿಡ್ 19 ಸ್ಥಿತಿ-ಗತಿ ಪರಿಶೀಲನೆ ಮಾಡಲು ತೆರಳಿದ್ದರು. ಅದಾದ ಬಳಿಕ ಮಾತನಾಡಿದ್ದ ಅವರು ಪ್ರಾರಂಭದಲ್ಲಿ ಲಸಿಕೆಯನ್ನು ವಿರೋಧಿಸಿದವರು ಇದೀಗ ಅದನ್ನು ಪಡೆಯಲು ಸಾಲಾಗಿ ನಿಂತಿದ್ದಾರೆ ಎಂದು ಹೇಳಿದ್ದರು. ಈ ಮೂಲಕ ಕೊವ್ಯಾಕ್ಸಿನ್ನ್ನು ಬಿಜೆಪಿ ಲಸಿಕೆ ಎಂದು ಹೇಳಿದ್ದ ಅಖಿಲೇಶ್ ಯಾದವ್ಗೂ ತಿರುಗೇಟು ನೀಡಿದ್ದರು.
ನಾವು ಕೊರೊನಾ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಅದರ ಫಲವಾಗಿ ಉತ್ತರ ಪ್ರದೇಶದಲ್ಲಿ ಸದ್ಯ ಕೊರೊನಾದಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.93ರಷ್ಟಿದೆ. ಈ ಚೇತರಿಕೆ ಪ್ರಮಾಣದಲ್ಲಿ ನಮ್ಮ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ ಇದೆ. ಇಟಾವಾ ಜಿಲ್ಲೆಯ ಆರೋಗ್ಯ ಕಾರ್ಯಕರ್ತರು, ಪೊಲೀಸರು ಕೂಡ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ.30ರಷ್ಟಿದ್ದದ್ದು, ಇದೀಗ ಶೇ. 2ಕ್ಕೆ ಇಳಿದಿದೆ. ಇದು ನಿಜಕ್ಕೂ ಶ್ಲಾಘನೀಯ ವಿಷಯ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಇದನ್ನೂ ಓದಿ: ವಿವಾಹಿತ ಮಹಿಳೆಯ ಜತೆ ಪ್ರೀತಿಯಲ್ಲಿ ಬಿದ್ದ ರಾಜಮೌಳಿ; ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಈ ನಿರ್ದೇಶಕನ ಪ್ರೇಮಕಥೆ