ವಿವಾಹಿತ ಮಹಿಳೆಯ ಜತೆ ಪ್ರೀತಿಯಲ್ಲಿ ಬಿದ್ದ ರಾಜಮೌಳಿ; ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಈ ನಿರ್ದೇಶಕನ ಪ್ರೇಮಕಥೆ
SS Rajamouli: ವೈವಾಹಿಕ ಜೀವನದ ವಿಚಾರಕ್ಕೆ ಬಂದರೆ ರಾಜಮೌಳಿ ಹಾಗೂ ರಮಾ ಅವರದ್ದು ಪ್ರೇಮ ವಿವಾಹ. ವಿಶೇಷವೆಂದರೆ ರಾಜಮೌಳಿಗಿಂತಲೂ ರಮಾ ನಾಲ್ಕು ವರ್ಷ ದೊಡ್ಡವರು. ಇದಕ್ಕಿಂತಲೂ ಅಚ್ಚರಿಯ ವಿಷಯವೆಂದರೆ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗುವ ವೇಳೆಗಾಗಲೇ ರಮಾ ಅವರಿಗೆ ಮದುವೆಯಾಗಿ ಒಂದು ಮಗು ಸಹ ಇತ್ತು.
ಒಂದು ಚಲನಚಿತ್ರ ಪ್ರೇಕ್ಷಕನನ್ನು ಸುಮಾರು ಮೂರು ತಾಸು ಹಿಡಿದುಕೊಟ್ಟುಕೊಳ್ಳುತ್ತದೆ ಎಂದರೆ ಅದು ಚಿತ್ರ ಜಗತ್ತಿಗಿರುವ ಮಾಂತ್ರಿಕ ಶಕ್ತಿ. ಒಬ್ಬ ಪಾತ್ರಧಾರಿಯನ್ನು ನೋಡುಗ ತನ್ನೊಳಗೆ ಆವಾಹಿಸಿಕೊಳ್ಳುವಂತೆ ಸಿನಿಮಾ ರೂಪುಗೊಳ್ಳುವುದು ತಮಾಷೆಯ ಮಾತಲ್ಲ. ಆ ಯಶಸ್ಸಿನಲ್ಲಿ ತೆರೆ ಮೇಲೆ ಕಾಣುವ ನಟರ ಪಾಲು ಎಷ್ಟಿರುತ್ತದೋ ಅಷ್ಟೇ ಅಥವಾ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ತೂಕ ಎನ್ನಬಹುದಾದ ಪಾಲು ನಿರ್ದೇಶಕನಿಗಿರುತ್ತದೆ. ಈಗೀಗ ಸಾಮಾಜಿಕ ಜಾಲತಾಣಗಳಲ್ಲಂತೂ ನಿಮ್ಮ ಜೀವನ ಒಂದು ಸಿನಿಮಾವೆಂದಾದರೆ ಅದನ್ನು ಯಾರು ನಿರ್ದೇಶಿಸಬೇಕು ಎಂಬ ಪ್ರಶ್ನೆಗಳೆಲ್ಲಾ ತೂರಿಬರುತ್ತಿರುತ್ತವೆ. ಹಾಗೆ ಪ್ರಶ್ನೆ ಎದುರಾದಾಗಲೆಲ್ಲಾ ಜನರು ಸಹಜವಾಗಿಯೇ ಸ್ಟಾರ್ ನಿರ್ದೇಶಕರೆಡೆಗೆ ಬೆರಳು ತೋರಿಸುತ್ತಾರೆ. ಭಾರತೀಯ ಚಿತ್ರರಂಗದಲ್ಲಿ ಅಂತಹ ಸ್ಟಾರ್ ನಿರ್ದೇಶಕರ ಪಟ್ಟಿ ತೆಗೆದರೆ ಅದರಲ್ಲಿ ಕಾಣಬಹುದಾದ ಪ್ರಮುಖ ಹೆಸರು ರಾಜಮೌಳಿ.
ರಾಜಮೌಳಿ ಸಿನಿಮಾಗಳೆಂದರೆ ಜನ ಹುಚ್ಚೆದ್ದು ನೋಡಲು ಕಾರಣ ಅವುಗಳಲ್ಲಿರುವ ವಿಭಿನ್ನತೆ. ದೊಡ್ಡ ನಾಯಕನಟರ ಸಿನಿಮಾಗಳಿಗೆ ಇರುವಷ್ಟೇ ಕ್ರೇಜ್ ಈ ಸ್ಟಾರ್ ನಿರ್ದೇಶಕನ ಸಿನಿಮಾಗಳಿಗೂ ಇದೆ. ಅಂದಹಾಗೆ ಈ ಗೆಲುಗಳ್ಯಾವುದೂ ಅವರಿಗೆ ಸುಖಾಸುಮ್ಮನೆ ದಕ್ಕಿದ್ದಲ್ಲ. ಏಕೆಂದರೆ ಪ್ರತಿ ಸಿನಿಮಾವನ್ನೂ ಮೊದಲ ಸಿನಿಮಾ ಎಂಬಂತೆಯೇ ಅತೀವ ಶ್ರದ್ಧೆಯಿಂದ ಅದನ್ನು ಕಟ್ಟಿಕೊಡುವ ರಾಜಮೌಳಿ, ಚಿತ್ರೀಕರಣ ಆರಂಭಕ್ಕೂ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡು ನಂತರವಷ್ಟೇ ಅಖಾಡಕ್ಕಿಳಿಯುತ್ತಾರೆ.
ಯಾವುದೇ ಕೆಲಸದಲ್ಲಿ ಒಬ್ಬ ವ್ಯಕ್ತಿ ಗೆಲುವಿನ ನಗೆ ಬೀರಬೇಕೆಂದರೆ ಆತನಿಗೆ ಕುಟುಂಬದವರ, ಹತ್ತಿರದವರ ಬೆಂಬಲ ಅತ್ಯಗತ್ಯ. ಅಂತೆಯೇ ರಾಜಮೌಳಿಯ ಗೆಲುವಿನ ಹಿಂದೆ ಕೂಡಾ ಅವರ ಪತ್ನಿ ರಮಾ ಅವರಿದ್ದಾರೆ. ರಾಜಮೌಳಿ ಅವರ ತಂತ್ರಜ್ಞರ ತಂಡದಲ್ಲಿ ವಸ್ತ್ರ ವಿನ್ಯಾಸಿಯಾಕಿ ಕೆಲಸ ಮಾಡುವ ರಮಾ ಅದರಾಚೆಗೆ ಸಿನಿಮಾದ ಕತೆ, ಪಾತ್ರದ ಆಯ್ಕೆ, ಸಂಗೀತ ಸೇರಿದಂತೆ ಎಲ್ಲ ವಿಷಯಗಳಲ್ಲೂ ತಮ್ಮ ಪತಿ ರಾಜಮೌಳಿಗೆ ಸಲಹೆ ನೀಡುತ್ತಿರುತ್ತಾರೆ. ಇಂತಿಪ್ಪ ಈ ಜೋಡಿ ಟಾಲಿವುಡ್ನಲ್ಲಿ ಎಲ್ಲರ ಮೆಚ್ಚಿನ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ.
ರಾಜಮೌಳಿಗಿಂತ ನಾಲ್ಕು ವರ್ಷ ದೊಡ್ಡವರು ರಮಾ ವೈವಾಹಿಕ ಜೀವನದ ವಿಚಾರಕ್ಕೆ ಬಂದರೆ ರಾಜಮೌಳಿ ಹಾಗೂ ರಮಾ ಅವರದ್ದು ಪ್ರೇಮ ವಿವಾಹ. ವಿಶೇಷವೆಂದರೆ ರಾಜಮೌಳಿಗಿಂತಲೂ ರಮಾ ನಾಲ್ಕು ವರ್ಷ ದೊಡ್ಡವರು. ಇದಕ್ಕಿಂತಲೂ ಅಚ್ಚರಿಯ ವಿಷಯವೆಂದರೆ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗುವ ವೇಳೆಗಾಗಲೇ ರಮಾ ಅವರಿಗೆ ಮದುವೆಯಾಗಿ ಒಂದು ಮಗು ಸಹ ಇತ್ತು. ವೈವಾಹಿಕ ಜೀವನದೊಳಗೆ ಕಾಲಿಟ್ಟಿದ್ದ ರಮಾ ಮತ್ತೆ ರಾಜಮೌಳಿಯ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ತಮ್ಮ ಗಂಡನನ್ನು ತೊರೆದು ಬಂದು ಇವರೊಂದಿಗೆ ಮದುವೆಯಾಗಿದ್ದು ಎಲ್ಲವೂ ಒಂದು ಸಿನಿಮಾ ಕತೆಯಂತೆಯೇ ಭಾಸವಾಗುತ್ತದೆ.
ಬಾಲ್ಯದಿಂದಲೂ ಕಷ್ಟಗಳನ್ನು ಅನುಭವಿಸಿದ್ದ ರಮಾ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ನಂತರ ಕಷ್ಟದ ದಿನಗಳನ್ನು ಎದುರು ನೋಡುತ್ತಾ ತಾಯಿಯ ಆರೈಕೆಯಲ್ಲಿ ಬೆಳೆದರು. ರಮಾ ಹಾಗೂ ಅವರ ಸಹೋದರಿ ಶ್ರೀವಲ್ಲಿ ಇಬ್ಬರೂ ಅಮ್ಮನ ಸಹಾಯದೊಂದಿಗೆ ಬೆಳೆದರು. ಎಲ್ಲವೂ ಸರಿಯಾದ ದಿಕ್ಕಿನತ್ತ ತಿರುಗುತ್ತಿದೆ ಎನ್ನುವಾಗಲೇ ಅವರ ತಾಯಿ 1990ರಲ್ಲಿ ರಮಾ ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲೇ ಮದುವೆ ಮಾಡಿಸಿಬಿಟ್ಟರು. ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ ನಂತರ ರಮಾ ಅವರಿಗೆ ಒಂದು ಗಂಡು ಮಗುವೂ ಆಯಿತು. ಆದರೆ, ಆಕೆಯ ಗಂಡ ಮಾತ್ರ ಕಂಠಪೂರ್ತಿ ಕುಡಿದು ಬಂದು ಹಿಂಸೆ ನೀಡುತ್ತಿದ್ದನಾದ್ದರಿಂದ ಬದುಕಿನಲ್ಲಿ ನೆಮ್ಮದಿ ಮಾಸಿ ಹೋಗಿ ನರಕ ಯಾತನೆ ಅನುಭವಿಸುವಂತಾಯ್ತು. ಅಂತೂ ಒಂದು ದಿನ ಕಷ್ಟ ಸಹಿಸಲು ಇನ್ನು ಅಸಾಧ್ಯ ಎಂದೆನಿಸಿದ ಕಾರಣ ರಮಾ ದೃಢ ನಿರ್ಧಾರ ಮಾಡಿ ಮಗನನ್ನು ಕರೆದುಕೊಂಡು ಅಕ್ಕ ಶ್ರೀವಲ್ಲಿಯ ಮನೆಗೆ ಹೋಗಿಬಿಟ್ಟರು.
ರಾಜಮೌಳಿ ಸಹ ಅದೇ ಮನೆಯಲ್ಲಿ ಇದ್ದರು ರಮಾ ಅವರ ಅಕ್ಕ ಶ್ರೀವಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿಯ ಪತ್ನಿ. ಕೀರವಾಣಿ-ಶ್ರೀವಲ್ಲಿ ಮನೆಯಲ್ಲಿದ್ದುಕೊಂಡೇ ರಮಾ ಜಸ್ಟ್ ಯೆಲ್ಲೋ ಮೀಡಿಯಾ ಎಂಬ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಆ ಸಂಸ್ಥೆ ತೆಲುಗಿನ ಅಮೃತಂ ಧಾರಾವಾಹಿ ನಿರ್ಮಾಣ ಮಾಡಿತ್ತು. ರಮಾ ಆ ಸಂದರ್ಭದಲ್ಲಿ ಅಕ್ಕನ ಮನೆಗೆಂದು ಬಂದಾಗ ಅಲ್ಲಿ ರಾಜಮೌಳಿ ಸಹ ಇದ್ದರು. ಶ್ರೀವಲ್ಲಿ ಅವರ ಪತಿ ಕೀರವಾಣಿಗೆ ಸಹೋದರ ಸಂಬಂಧಿ ಆಗಿದ್ದ ರಾಜಮೌಳಿ ಆ ಸಮಯದಲ್ಲಿ ನಿರ್ದೇಶಕ ರಾಘವೇಂದ್ರ ಅವರಿಗೆ ಸಹಾಯಕರಾಗಿದ್ದರು.
ಧಾರಾವಾಹಿ ಮೂಲಕ ಬೆಸೆದ ಸಂಬಂಧ ರಾಘವೇಂದ್ರ ರಾವ್ ಆಗತಾನೇ ಶಾಂತಿ ನಿವಾಸ ಹೆಸರಿನ ಧಾರಾವಾಹಿ ಚಿತ್ರೀಕರಣ ಆರಂಭಿಸಿದ್ದರು. ರಾಜಮೌಳಿ ಅದೇ ಧಾರಾವಾಹಿಗೆ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ ರಮಾ ಧಾರಾವಾಹಿ ಕುರಿತು ರಾಜಮೌಳಿ ಅವರೊಟ್ಟಿಗೆ ಚರ್ಚಿಸಿ ಸಲಹೆ ನೀಡುತ್ತಿದ್ದರು. ಇಬ್ಬರೂ ಸಿನಿಮಾ, ಧಾರಾವಾಹಿ ಇತರೆ ವಿಷಯಗಳ ಬಗ್ಗೆ ಮಾತನಾಡುತ್ತಾ ತಲ್ಲೀನರಾಗುತ್ತಿದ್ದರು. ಅದಕ್ಕೆ ಸರಿಯಾಗಿ ಅದೇ ಸಮಯದಲ್ಲಿ ರಮಾ ತಮ್ಮ ಪತಿಯಿಂದ ವಿಚ್ಛೇದನ ಪಡೆದುಕೊಂಡು ಒಲ್ಲದ ಸಂಸಾರದಿಂದ ಮುಕ್ತಿ ಪಡೆದುಕೊಂಡರು.
ಮೊದಲ ಸಿನಿಮಾ ಚಿತ್ರೀಕರಣ ವೇಳೆಯಲ್ಲಿಯೇ ಮದುವೆ 2001 ರಲ್ಲಿ ರಾಜಮೌಳಿ ತಮ್ಮ ಮೊದಲ ಸಿನಿಮಾ ಸ್ಟುಡೆಂಟ್ ನಂ 1 ಆರಂಭಿಸದ್ದರು. ರಾಘವೇಂದ್ರ ರಾವ್ ಅವರೇ ಸಿನಿಮಾ ನಿರ್ಮಾಪಕರಾಗಿದ್ದರು. ಆ ಸಿನಿಮಾದಲ್ಲಿ ಕಾಸ್ಟೂಮ್ ಡಿಸೈನ್ ಮಾಡಿದ್ದ ರಮಾ ಬೇರೆ ವಿಚಾರದಲ್ಲೂ ರಾಜಮೌಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲೇ ಅವರಿಬ್ಬರ ಒಡನಾಟ ಮತ್ತಷ್ಟು ಗಾಢವಾಗಿ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಕೆಲವೇ ಮಂದಿ ಗೆಳೆಯರ ಸಮ್ಮುಖದಲ್ಲಿ ರಾಜಮೌಳಿ, ರಮಾ ಅವರನ್ನು ವರಿಸಿದರು.
ನಾನು ಬಯಸಿದ ಹುಡುಗಿಯ ಎಲ್ಲಾ ಗುಣಗಳೂ ರಮಾ ಅವರಲ್ಲಿತ್ತು: ರಾಜಮೌಳಿ ರಾಜಮೌಳಿ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರು ಯಾವ ಬಗೆಯ ಹುಡುಗಿಯನ್ನು ವಿವಾಹವಾಗಬೇಕು ಎಂದುಕೊಂಡಿದ್ದರೋ ಆ ಎಲ್ಲ ಗುಣಗಳನ್ನು ರಮಾ ಅವರಲ್ಲಿ ಕಂಡಿದ್ದರಂತೆ. ಪರಸ್ಪರ ಇಷ್ಟಪಟ್ಟು ವಿವಾಹವಾದ ಅಂದಿನಿಂದ ಇಂದಿನವರೆಗೂ ಅವರಿಬ್ಬರ ನಡುವೆ ಸಣ್ಣ ಮನಸ್ತಾಪ ಕೂಡಾ ಬಂದಿಲ್ಲ ಎನ್ನುವುದು ವಿಶೇಷ. ಇದೇ ಮಾತನ್ನು ರಮಾ ಕೂಡಾ ಬೇರೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಮಾರ ಮಗನನ್ನು ತಮ್ಮ ಮಗನಂತೆ ಸಾಕಿದ ರಾಜಮೌಳಿ ಇತ್ತೀಚೆಗಷ್ಟೆ ಆತನಿಗೆ ಮದುವೆ ಮಾಡಿದರು. ಮಗನ ಜೊತೆಗೆ ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕುತ್ತಿರುವ ಈ ದಂಪತಿ ಒಂದಾಗಿದ್ದು ನಿಜಕ್ಕೂ ಅದ್ಭುತ ವಿಚಾರ ಎಂದೆನಿಸದೇ ಇರದು.
ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಟ ಮಹೇಶ್ ಬಾಬುಗೆ ಕಥೆ ಬರೆದಿದ್ದಾರೆ
ಬಿಗ್ ಬಾಸ್ ಸ್ಪರ್ಧಿ ನಿಧಿ ಸುಬ್ಬಯ್ಯ ವೈವಾಹಿಕ ಜೀವನದ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ
Published On - 10:14 pm, Tue, 25 May 21