Explainer | Sandes: ವಾಟ್ಸ್ಯಾಪ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ಸರ್ಕಾರಿ ಆ್ಯಪ್ ‘ಸಂದೇಸ್’

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 16, 2021 | 3:43 PM

Sandes App: ಭಾರತ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ ರಚಿಸಿರುವ ಸಂದೇಸ್​ನಲ್ಲಿ ಗ್ರೂಪ್ ರಚಿಸಬಹುದು, ಬ್ರಾಡ್​ಕಾಸ್ಟ್ ಮೆಸೇಜ್ ಕಳಿಸಬಹುದು.

Explainer | Sandes: ವಾಟ್ಸ್ಯಾಪ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ಸರ್ಕಾರಿ ಆ್ಯಪ್ ಸಂದೇಸ್
ಕೇಂದ್ರ ಸರ್ಕಾರದ ಸಂದೇಸ್ ಮೆಸೇಜಿಂಗ್ ಆ್ಯಪ್ ಇದೀಗ ಸಾರ್ವಜನಿಕರಿಗೂ ಲಭ್ಯವಾಗಲಿದೆ.
Follow us on

ವಾಟ್ಸ್ಯಾಪ್​​ ಸೇರಿ ಖಾಸಗಿ ಮೆಸೇಜಿಂಗ್ ಆ್ಯಪ್​ಗಳಿಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರವೇ ಕಣಕ್ಕಿಳಿದಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ (National Informatics Centre – NIC) ‘ಸಂದೇಸ್’ ಎಂಬ ಆ್ಯಪ್​ ಬಿಡುಗಡೆಗೊಳಿಸಿದೆ. ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸದ ಮೂಲಕ ಎಲ್ಲಾ ಬಗೆಯ ಸಂದೇಶ ವಿನಿಮಯವನ್ನೂ ‘ಸಂದೇಸ್’ ಮೂಲಕ ಮಾಡಬಹುದಾಗಿದೆ.

ಕೊರೊನಾ ಪಿಡುಗು ದೇಶದ ಆಡಳಿತ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿತ್ತು. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಒದಗಿಸಿದ್ದವು. ಆಗ ಮುಂಚೂಣಿಗೆ ಬಂದಿದ್ದೇ ಚೀನಾ ಮೂಲದ ಝೂಮ್ ಆ್ಯಪ್. ಸರ್ಕಾರಿ ಇಲಾಖೆಗಳು, ಅಧಿಕಾರಿಗಳು, ಖಾಸಗಿ ಕಂಪನಿಗಳು..ಹೀಗೆ ಎಲ್ಲರೂ ಸಂವಹನಕ್ಕಾಗಿ ಝೂಮ್ ಹಿಂದೇ ಬಿದ್ದರು. ಆದರೆ ಕೆಲ ದಿನಗಳಲ್ಲಿ ಝೂಮ್ ಚೀನಾ ಮೂಲದ್ದೆಂದೂ, ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆಯೆಂದೂ ಮಾತುಗಳು ಕೇಳಿಬಂದವು. ಸರ್ಕಾರದ ಗೌಪ್ಯ ಮಾಹಿತಿಗಳೂ ಸೇರಿ ಸಾರ್ವಜನಿಕವಾಗಿ ಅಥವಾ ಖಾಸಗಿ ವ್ಯಕ್ತಿಗಳಿಗೆ ದೊರಕಬಾರದ ಮಾಹಿತಿಗಳು ಝೂಮ್​ನಂತಹ ಆ್ಯಪ್​ನಿಂದ ಆಗಂತುಕರ ಕೈಗೆ ಸೇರುವ ಸಾಧ್ಯತೆ ಅರಿವಾಯಿತು. ಆಗಲೇ ಎಚ್ಚೆತ್ತಿತು ಸರ್ಕಾರ.

ತನ್ನ ಆಂತರಿಕ ಮಾಹಿತಿಗಳ ಸುರಕ್ಷತೆಗಾಗಿ ಕಳೆದ ನಾಲ್ಕು ವರ್ಷಗಳಿಂದಲೇ ಸಂದೇಸ್ ಎಂಬ ಆ್ಯಪ್​ನ್ನು ತನ್ನ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಿತ್ತು ಕೇಂದ್ರ ಸರ್ಕಾರ. ಈಗ ಸಾರ್ವಜನಿಕರಿಗೂ ಸಂದೇಸ್ ಆ್ಯಪ್​ನ್ನು ಒದಗಿಸಲು ಮುಂದಾಗಿದೆ.

ಇದನ್ನೂ ಓದಿ: ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್‌ ಆ್ಯಪ್​ಗಿಂತ ಸುಧಾರಿತವಾದ ಆ್ಯಪ್​ ಬಳಸ್ತಿದ್ದಾರೆ ಉಗ್ರರು; IP ವಿಳಾಸವೂ ಇರುವುದಿಲ್ಲ! NIA ತನಿಖೆಯಿಂದ ಬಹಿರಂಗ

ಹೇಗಿದೆ ಸಂದೇಶ್?
ಸದ್ಯ ಮುನ್ನೆಲೆಯಲ್ಲಿರುವ ಮೆಸೇಜಿಂಗ್ ಆ್ಯಪ್​ಗಳಾದ ವಾಟ್ಸ್​ಆ್ಯಪ್​ನಂತಹ ಮೆಸೆಂಜಿಂಗ್ ಆ್ಯಪ್​ನಂತೆಯೇ ಸಂದೇಸ್ ವಿನ್ಯಾಸ ಹೊಂದಿದೆ. ಆದರೆ ಇನ್ನೊಂದು ಮೆಸೇಜಿಂಗ್ ಆ್ಯಪ್​ನಲ್ಲಿ ನಡೆದ ಸಂದೇಶ ವಿನಿಮಯವನ್ನು ಈ ಆ್ಯಪ್​ಗೆ ವರ್ಗಾಯಿಸಲು ಸಾಧ್ಯವಿಲ್ಲ. ಸಂದೇಸ್​ನಲ್ಲಿ ಗ್ರೂಪ್ ರಚಿಸಬಹುದು, ಬ್ರಾಡ್​ಕಾಸ್ಟ್ ಮೆಸೇಜ್ ಕಳಿಸಬಹುದು ಮತ್ತು ಬಗೆಬಗೆಯ ಇಮೋಜಿಗಳೂ ಲಭ್ಯವಿವೆ.

ಸುರಕ್ಷತೆಗೆ ಇದೆ ಆದ್ಯತೆ
ಸಂದೇಸ್ ತನ್ನ ಬಳಕೆದಾರರ ಮೆಸೇಜ್​ಗಳಿಗೆ ಸುರಕ್ಷತೆ ನೀಡಲು ಆದ್ಯತೆ ನೀಡುತ್ತದೆ. ಇಬ್ಬರ ನಡುವೆ ವಿನಿಮಯವಾದ ಸಂದೇಶವನ್ನು ಮೂರನೇ ವ್ಯಕ್ತಿಗೆ ತಲುಪದಂತೆ ತಡೆಯುವ ಆಪ್ಶನ್​ ಸಹ ಸಂದೇಸ್​ನಲ್ಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ ಸಂದೇಸ್ ಇದೀಗ ಸಾರ್ವಜನಿಕರಿಗೂ ಲಭ್ಯವಾಗಲಿರುವುದು ಸಹಜವಾಗಿ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಸಾರ್ವಜನಿಕರ ಬಳಕೆಗಾಗಿ ಪ್ಲೇಸ್ಟೋರ್​ನಲ್ಲಿ ಬಿಡುಗಡೆಯಾಗುವ ಸಂಭವವಿದೆ. ವಾಟ್ಸ್​ಆ್ಯಪ್​ ಕುರಿತು ಖಾಸಗಿ ಮಾಹಿತಿ ಸೋರಿಕೆ ವಿವಾದ ಭುಗಿಲೆದ್ದು ಸಿಗ್ನಲ್​ನಂತಹ ಕೆಲ ಆ್ಯಪ್​ಗಳು ಮುನ್ನೆಲೆಗೆ ಬಂದು ಮತ್ತೆ ಮರೆಯಾದ ಬೆನ್ನಲ್ಲೇ ಸಂದೇಸ್ ಆದರೂ ಸಂಚಲನ ಮೂಡಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ವಾಟ್ಸಾಪ್​​-ಟೆಲಿಗ್ರಾಂ-ಸಿಗ್ನಲ್​: ಯಾವ ಆ್ಯಪ್​ ಹೆಚ್ಚು ಸೇಫ್​? ಇಲ್ಲಿದೆ ವಿವರ

Published On - 3:42 pm, Tue, 16 February 21