ಯೆಮೆನ್‌ನಲ್ಲಿ ಗಲ್ಲಿಗೇರಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
Nimisha Priya Case: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಸಹಾಯ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ನಿಮಿಷಾ ಪ್ರಿಯಾ ಮರಣದಂಡನೆಗೂ ಕೇವಲ 2 ದಿನಗಳ ಮೊದಲು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ. ಜುಲೈ 16ರಂದು ಯೆಮೆನ್‌ನಲ್ಲಿ ನಿಮಿಷಾ ಗಲ್ಲಿಗೇರಲಿದ್ದಾರೆ. ಹೀಗಾಗಿ, ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಜುಲೈ 14ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ನವದೆಹಲಿ, ಜುಲೈ 10: ಯೆಮೆನ್‌ನಲ್ಲಿ ಮರಣದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಪ್ರಕರಣದ ಬಗ್ಗೆ ಬಾರತದಲ್ಲಿ ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ಜುಲೈ 16ರಂದು ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತಿದೆ. ಈ ಪ್ರಕರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಇಂದು (ಗುರುವಾರ) ಒಪ್ಪಿಕೊಂಡಿದೆ.
ಜುಲೈ 16ರಂದು ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಗಲ್ಲಿಗೇರಲಿದ್ದಾರೆ. ಜುಲೈ 14ರಂದು ಭಾರತದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ಜುಲೈ 14ರಂದು ವಿಚಾರಣೆಗೆ ನಿಗದಿಪಡಿಸಿದೆ. ನಿಮಿಷಾ ಅವರಿಗೆ 2017ರಲ್ಲಿ ತಮ್ಮ ಬ್ಯುಸಿನೆಸ್ ಪಾರ್ಟನರ್ ಅನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ನರ್ಸ್ ಆಗಿರುವ ನಿಮಿಷಾ ಪ್ರಿಯಾ (38) ಅವರು 2017ರಲ್ಲಿ ಯೆಮೆನ್‌ಗೆ ಉದ್ಯೋಗಕ್ಕೆ ತೆರಳಿದ್ದರು. ಅವರಿಗೆ 2020ರಲ್ಲಿ ಮರಣದಂಡನೆ ವಿಧಿಸಲಾಯಿತು. ಅವರ ಅಂತಿಮ ಮೇಲ್ಮನವಿಯನ್ನು 2023ರಲ್ಲಿ ತಿರಸ್ಕರಿಸಲಾಗಿತ್ತು.
ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಆಯೋಗ ಮಾಡಬಾರದ್ದೇನೂ ಮಾಡಿಲ್ಲ ಎಂದು ಸುಪ್ರೀಂ
ನಿಮಿಷಾ ಪ್ರಿಯಾ ಪ್ರಸ್ತುತ ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಮಿಷಾ ಪ್ರಿಯಾ ಅವರಿಗೆ ಸಹಾಯ ಮಾಡಲು ಕಾನೂನು ಬೆಂಬಲ ನೀಡುವ “ಸೇವ್ ನಿಮಿಷಾ ಪ್ರಿಯಾ – ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್” ಎಂಬ ಸಂಸ್ಥೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ನಿಮಿಷಾ ಪ್ರಿಯಾಳ ಮರಣದಂಡನೆಗೆ ತಾತ್ಕಾಲಿಕ ದಿನಾಂಕವನ್ನು ಯೆಮೆನ್ ಆಡಳಿತವು ಜುಲೈ 16ಎಂದು ನಿಗದಿಪಡಿಸಿದೆ ಎಂದು ಹೇಳುವ ಮಾಧ್ಯಮ ವರದಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ನಿಮಿಷಾ ಹಿನ್ನೆಲೆ:
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಅವರು ತಮ್ಮ ದೈನಂದಿನ ಕೂಲಿ ಕಾರ್ಮಿಕರಾದ ಪೋಷಕರಿಗೆ ಆರ್ಥಿಕ ಸಹಾಯ ನೀಡಲು ಯೆಮೆನ್‌ಗೆ ತೆರಳಿದ್ದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ನೇಣು
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಅಲ್ಲಿ ಬ್ಯುಸಿನೆಸ್ ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಮಿಷಾ ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ತನ್ನ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ. ಆತನಿಂದ ನಿಮಿಷಾ ತನ್ನ ಪಾಸ್‌ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




