ದೆಹಲಿ ಮೇ 10: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು 50 ದಿನಗಳ ಬಂಧನದ ನಂತರ ಶುಕ್ರವಾರ ಸಂಜೆ 7 ಗಂಟೆಗೆ ತಿಹಾರ್ ಜೈಲಿನಿಂದ (Tihar Jail) ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಕೇಜ್ರಿವಾಲ್, ಇಲ್ಲಿ ತುಂಬಾ ಖುಷಿ ಅನಿಸುತ್ತಿದೆ. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಹೇಳಿದ್ದೆ, ಬಂದಿದ್ದೀನಿ ನೋಡಿ ಎಂದು ಹೇಳಿದ್ದಾರೆ. ಆಲಿವ್ ಟೀ ಶರ್ಟ್ ಧರಿಸಿದ ಕೇಜ್ರಿವಾಲ್, ತಮ್ಮ ಪಕ್ಷದ ಕಾರ್ಯಕರ್ತರ ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಆಶೀರ್ವಾದಕ್ಕಾಗಿ ಹನುಮಾನ್ ದೇವರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್ ಅವರು ಶನಿವಾರ ಬೆಳಿಗ್ಗೆ 11 ಗಂಟೆಗೆ ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದು, ನಂತರ ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ತಿಹಾರ್ ಗೇಟ್ ಸಂಖ್ಯೆ 3 ರಲ್ಲಿ ವ್ಯವಸ್ಥೆ ಮಾಡಲಾಗಿತ್ತು .ಆದರೆ ಕೇಜ್ರಿವಾಲ್ ಅವರನ್ನು ಗೇಟ್ ಸಂಖ್ಯೆ 4 ರಿಂದ ಬಿಡುಗಡೆ ಮಾಡಲಾಯಿತು. ಅಲ್ಲಿಂದ ಅವರು ಗೇಟ್ ಸಂಖ್ಯೆ 3 ಗೆ ಬಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತು. ಜೈಲು ಅಧಿಕಾರಿಗಳು ಆದೇಶವನ್ನು ಜೈಲಿಗೆ ತಲುಪಿದ ನಂತರ ಪ್ರಕ್ರಿಯೆಗೊಳಿಸಿದ್ದು, ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಿದರು.
VIDEO | Delhi CM Arvind Kejriwal (@ArvindKejriwal) comes out of Tihar Jail after the Supreme Court granted him interim bail till June 1 earlier today.
(Full video available on PTI Videos – https://t.co/dv5TRARJn4) pic.twitter.com/8awecigsMf
— Press Trust of India (@PTI_News) May 10, 2024
ಜಾಮೀನು ಷರತ್ತುಗಳ ಪ್ರಕಾರ, ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಕಚೇರಿ ಅಥವಾ ಸಚಿವಾಲಯಕ್ಕೆ ಭೇಟಿ ನೀಡುವುದಿಲ್ಲ ಮತ್ತು ಯಾವುದೇ ಮುಖ್ಯಮಂತ್ರಿ ಕರ್ತವ್ಯವನ್ನು ನಿರ್ವಹಿಸುವುದಿಲ್ಲ. ಜೂನ್ 2 ರಂದು ಮತ್ತೆ ಜೈಲಿಗೆ ಬರಬೇಕಾಗುತ್ತದೆ.
ಜೈಲಿನಿಂದ ಹೊರಬಂದ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಧನ್ಯವಾದ ತಿಳಿಸಿದ್ದಾರೆ. “ನಾವು ಸರ್ವಾಧಿಕಾರದಿಂದ ದೇಶವನ್ನು ಉಳಿಸಬೇಕಾಗಿದೆ” ಎಂದು ನಾನು ನಿಮ್ಮೆಲ್ಲರಲ್ಲಿ ಒಂದೇ ಒಂದು ಮನವಿಯನ್ನು ಮಾಡುತ್ತಿದ್ದೇನೆ ಎಂದು ಜೈಲಿನಿಂದ ಹೊರಬಂದು ಭಾಷಣ ಮಾಡಿದ ದೆಹಲಿ ಸಿಎಂ ಹೇಳಿದ್ದಾರೆ. ಅಲ್ಲಿಂದ ಕೇಜ್ರಿವಾಲ್ ಅವರು ತಮ್ಮದೇ ಬೆಂಗಾವಲು ಪಡೆಯಲ್ಲಿ ತಿಹಾರ್ ನಿಂದ ಹೊರಟಿದ್ದಾರೆ. ಅವರ ಪತ್ನಿ ಸುನೀತಾ ಕೇಜ್ರಿವಾಲ್, ಪುತ್ರಿ ಹರ್ಷಿತಾ ಮತ್ತು ಎಎಪಿ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರೊಂದಿಗೆ ಇದ್ದರು.
ಇದನ್ನೂ ಓದಿ: Sandeshkhali violence: ಎನ್‌ಸಿಡಬ್ಲ್ಯೂ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ಟಿಎಂಸಿ ಬೆದರಿಕೆ
ಮಧ್ಯಂತರ ಜಾಮೀನು ನೀಡಿದ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಎಎಪಿ ಬೆಂಬಲಿಗರು ಸಿಹಿ ಹಂಚಿ, ನೃತ್ಯ ಮಾಡಿದ್ದಾರೆ. “ಜೈಲ್ ಕೆ ತಾಲೇ ಟೂಟ್ ಗಯೇ, ಕೇಜ್ರಿವಾಲ್ ಜಿ ಚೂಟ್ ಗಯೇ” (ಜೈಲಿನ ಬೀಗ ತೆರೆಯಿತು, ಕೇಜ್ರಿವಾಲ್ ಮುಕ್ತರಾದರು) “ಮೋದಿ ಜಿ ಜಾ ರಹೇ ಹೈ, ಕೇಜ್ರಿವಾಲ್ ಜಿ ಆ ರಹೇ ಹೈ,”(ಮೋದಿ ಜೀ ಹೋಗುತ್ತಾರೆ, ಕೇಜ್ರಿವಾಲ್ ಬರುತ್ತಿದ್ದಾರೆ) ಮತ್ತು “ದೇಖೋ ದೇಖೋ ಕೋನ್ ಆಯಾ, ಶೇರ್ ಆಯಾ, ಶೇರ್ ಆಯಾ “(ನೋಡಿ ಯಾರು ಬರುತ್ತಿದ್ದಾರೆ, ಸಿಂಹ ಬರುತ್ತಿದೆ) ಎಂಬ ಘೋಷಣೆಗಳನ್ನು ಕೂಗಿ ಎಎಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ