Sandeshkhali violence: ಎನ್‌ಸಿಡಬ್ಲ್ಯೂ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ಟಿಎಂಸಿ ಬೆದರಿಕೆ

ಶರ್ಮಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಟಿಎಂಸಿ ಮುಂದಾಗಿದ್ದು ಈ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಸಚಿವೆ ಮತ್ತು ಟಿಎಂಸಿ ವಕ್ತಾರೆ ಶಶಿ ಪಂಜಾ, ಎನ್‌ಸಿಡಬ್ಲ್ಯೂ ಅಧ್ಯಕ್ಷರು ಸಂದೇಶಖಾಲಿ ಆರೋಪಗಳ ಬಗ್ಗೆ "ರಾಜಕೀಯ ಪಕ್ಷಪಾತ" ದಿಂದ ವರ್ತಿಸಿದ್ದಾರೆ. "ಈ ಪ್ರದೇಶದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ" ಎಂದು ಆರೋಪಿಸಿದ್ದಾರೆ.

Sandeshkhali violence: ಎನ್‌ಸಿಡಬ್ಲ್ಯೂ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗುವುದಾಗಿ ಟಿಎಂಸಿ ಬೆದರಿಕೆ
ರೇಖಾ ಶರ್ಮ
Follow us
ರಶ್ಮಿ ಕಲ್ಲಕಟ್ಟ
|

Updated on: May 10, 2024 | 7:57 PM

ಕೊಲ್ಕತ್ತಾ ಮೇ 10: ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ (Rekha Sharma) ವಿರುದ್ಧ ಚುನಾವಣಾ ಆಯೋಗಕ್ಕೆ (EC) ಔಪಚಾರಿಕ ದೂರು ಸಲ್ಲಿಸುವುದಾಗಿ ತೃಣಮೂಲ ಕಾಂಗ್ರೆಸ್ (TMC) ಹೇಳಿದೆ. “ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರುಗಳನ್ನು ನೀಡಲು ಸ್ಥಳೀಯ ಬಿಜೆಪಿ ನಾಯಕರು ತಮ್ಮನ್ನು ಒತ್ತಾಯಿಸಿದ್ದಾರೆ ಎಂದು ಅನೇಕ ಮಹಿಳೆಯರು ಆರೋಪಿಸಿದ ನಂತರ ಟಿಎಂಸಿ ಈ ಕ್ರಮಕ್ಕೆ ಮುಂದಾಗಿದೆ. ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸೆಯ ಆರೋಪದ ಮೇಲೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಎನ್‌ಸಿಡಬ್ಲ್ಯೂ ಅಧ್ಯಕ್ಷರು ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡಿದ್ದರು.

ಶರ್ಮಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಟಿಎಂಸಿ ಮುಂದಾಗಿದ್ದು ಈ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಸಚಿವೆ ಮತ್ತು ಟಿಎಂಸಿ ವಕ್ತಾರೆ ಶಶಿ ಪಂಜಾ, ಎನ್‌ಸಿಡಬ್ಲ್ಯೂ ಅಧ್ಯಕ್ಷರು ಸಂದೇಶಖಾಲಿ ಆರೋಪಗಳ ಬಗ್ಗೆ “ರಾಜಕೀಯ ಪಕ್ಷಪಾತ” ದಿಂದ ವರ್ತಿಸಿದ್ದಾರೆ. “ಈ ಪ್ರದೇಶದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಗುರುವಾರ ಟಿಎಂಸಿ ಹಂಚಿಕೊಂಡ ಸಂದೇಶಖಾಲಿ ಮಹಿಳೆಯರ ವಿಡಿಯೊಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಆ ಮಹಿಳೆಯರ ಖಾಲಿ ಪೇಪರ್‌ಗಳಿಗೆ ಸಹಿ ಹಾಕುವಂತೆ ಮಾಡಿದ್ದು, ನಂತರ ಅದನ್ನು ಲೈಂಗಿಕ ದೌರ್ಜನ್ಯದ ದೂರುಗಳಾಗಿ ಭರ್ತಿ ಮಾಡಲಾಯಿತು ಎಂದಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತೆ ಪಿಯಾಲಿ ದಾಸ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಖುದ್ದಾಗಿ ಹಾಜರಾಗಲು ಮತ್ತು ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಲು ಸಂದೇಶ್‌ಖಾಲಿಗೆ ಭೇಟಿ ನೀಡಿದ್ದ ಎನ್‌ಸಿಡಬ್ಲ್ಯೂ ತಂಡದ ಮುಂದೆ ಆರೋಪಗಳನ್ನು ಹೇಳುವಂತೆ ಕೇಳಿಕೊಂಡರು ಎಂದು ಆ ವಿಡಿಯೊಗಳಲ್ಲಿನ ಮಹಿಳೆಯರು ಹೇಳಿದ್ದಾರೆ. ಮಹಿಳೆಯರು ತಾವು ಎಂದಿಗೂ ಲೈಂಗಿಕ ದೌರ್ಜನ್ಯದ ದೂರುಗಳನ್ನು ದಾಖಲಿಸಲು ಉದ್ದೇಶಿಸಿಲ್ಲ. ಆದರೆ ನಂತರ ದಾಸ್ ಅವರು ಸಹಿ ಮಾಡಿದ ಖಾಲಿ ಪೇಪರ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಅಂತಹ ದೂರುಗಳನ್ನು ದಾಖಲಿಸಿರುವುದನ್ನು ಕಂಡು ಅಚ್ಚರಿಯಾಯಿತು ಎಂದು ಮಹಿಳೆಯರು ಹೇಳಿದ್ದಾರೆ.

ಟಿಎಂಸಿ ಹಂಚಿಕೊಂಡಿರುವ  ಬೇರೆ ಬೇರೆ ವಿಡಿಯೊಗಳಲ್ಲಿ, ಮಹಿಳೆಯರು ಆ ದೂರುಗಳನ್ನು ಹಿಂತೆಗೆದುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಬಿಜೆಪಿಯು ತಮ್ಮ ಮರುಪರಿಶೀಲನೆಯ ಬಯಕೆಯನ್ನು ವ್ಯಕ್ತಪಡಿಸಿದ ನಂತರ ಬೆದರಿಕೆಗಳು ಮತ್ತು ವಿತ್ತೀಯ ಪರಿಹಾರಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು.

ಸಂದೇಶಖಾಲಿಯಲ್ಲಿನ ದೌರ್ಜನ್ಯದ ಆರೋಪದ ಮೇಲೆ ಬಿಜೆಪಿ “ಒಂದು ವ್ಯವಸ್ಥೆಯನ್ನು” ರಚಿಸಲು ಪ್ರಯತ್ನಿಸುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ವಿವಿಧ ಸಂಘಟನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟಿಎಂಸಿ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: ಕೆ ಕವಿತಾ ಆರೋಪಿ; ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಹೊಸ ಚಾರ್ಜ್ ಶೀಟ್ ಸಲ್ಲಿಸಿದ ಇಡಿ

ಬಿಜೆಪಿ ಕೇಂದ್ರ ನಾಯಕತ್ವವು ಚುನಾವಣಾ ಪ್ರಚಾರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರೂ, ಅಲ್ಲಿ ಹೊಸ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಸಂದೇಶಖಾಲಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮತ್ತೊಮ್ಮೆ ಬರಲಿರುವ ಅಮಿತ್ ಶಾ ಈ ವಿಷಯದ ಬಗ್ಗೆ ಮಾತನಾಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಪಂಜಾ ಹೇಳಿದ್ದು, ಮತಗಳನ್ನು ಸೆಳೆಯಲು ಬಿಜೆಪಿ ಸಂದೇಶಖಾಲಿ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಆರೋಪಗಳ ಬಗ್ಗೆ ಟಿಎಂಸಿ ಈಗಾಗಲೇ ಬಿಜೆಪಿ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ ಎಂದು ಪಂಜಾ ಹೇಳಿದರು. ಆದಾಗ್ಯೂ ಅಧಿಕಾರಿ, ಈಗಾಗಲೇ ಟಿಎಂಸಿಯ ಆರೋಪಗಳನ್ನು ತಳ್ಳಿಹಾಕಿದ್ದು ಈ ವಿಷಯದ ಬಗ್ಗೆ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ