ಜಮ್ಮು – ಕಾಶ್ಮೀರದಲ್ಲಿ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿಯನ್ನು ದಾನವಾಗಿ ನೀಡಿದ ಇಬ್ಬರು ಮುಸ್ಲಿಮರು
ಜಮ್ಮು - ಕಾಶ್ಮೀರದಲ್ಲಿ ಧಾರ್ಮಿಕ ವಿಚಾರದಲ್ಲಿ ಬದಲಾವಣೆ ಆಗುತ್ತಿದೆ. ಇದಕ್ಕೆ ಸಾಕ್ಷಿ ಈ ಸ್ಟೋರಿ ನೋಡಿ. ದಂಗೆ, ಹಿಂಸೆಯನ್ನೇ ಎದುರಿಸುತ್ತಿದ್ದ ಜಮ್ಮು - ಕಾಶ್ಮೀರದಲ್ಲಿ ಅನೇಕ ವಿಚಾರಗಳು ಬದಲಾವಣೆ ಆಗುತ್ತಿದೆ, ದೊಡ್ಡ ರಸ್ತೆಗಳು, ಶಾಲಾ-ಕಾಲೇಜಿಗಳು, ತಂತ್ರಜ್ಞಾನದಲ್ಲಿ ಬದಲಾವಣೆ ಹೀಗೆ ಅನೇಕ ಯೋಜನೆಗಳನ್ನು ಜಮ್ಮು - ಕಾಶ್ಮೀರ ಪಡೆಯುತ್ತಿದೆ. ಇದೀಗ ಭಾವೈಕ್ಯತೆಗೂ ಜಮ್ಮು - ಕಾಶ್ಮೀರ ಸಾಕ್ಷಿಯಾಗುತ್ತಿದೆ.
ಜಮ್ಮು – ಕಾಶ್ಮೀರ (Jammu and Kashmir) ಬದಲಾಗುತ್ತಿದೆ. ಹಿಂಸೆ, ದಂಗೆಗಳಿಂದ ಮುಕ್ತವಾಗುತ್ತಿದೆ. ಅಭಿವೃದ್ಧಿ, ಶಾಂತಿಯತ್ತ ಸಾಗುತ್ತಿದೆ. ಧಾರ್ಮಿಕ ವಿಚಾರದಲ್ಲೂ ಕೂಡ ಜಮ್ಮು -ಕಾಶ್ಮೀರ ಬದಲಾಗುತ್ತಿದೆ. ಇದೀಗ 500 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯಕ್ಕೆ ರಸ್ತೆ ಮಾಡಲು ರಿಯಾಸಿ ಜಿಲ್ಲೆಯ ಇಬ್ಬರು ಮುಸ್ಲಿಮರು ತಮ್ಮ ಭೂಮಿಯನ್ನು ನೀಡಿದ್ದಾರೆ. ಈ ದೇವಾಲಯಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಮತ್ತು ಆ ದೇವಾಲಯಕ್ಕೆ ಈ ಇಬ್ಬರು ಮುಸ್ಲಿಂ ವ್ಯಕ್ತಿಗಳ ಜಾಗದಿಂದಲ್ಲೇ ಸಾಗಬೇಕಿದೆ. ಇದಕ್ಕಾಗಿ ದೇವಾಲಯದ ಬಗ್ಗೆ ಅಭಿಮಾನ ಇರುವ ಈ ಇಬ್ಬರು ಮುಸ್ಲಿಂ ವ್ಯಕ್ತಿಗಳು ದಾನವಾಗಿ ಭೂಮಿ ನೀಡಿದ್ದಾರೆ.
ಖೇರಾಳ್ ಪಂಚಾಯಿತಿಯ ನಿವಾಸಿಗಳಾದ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್ ಅವರು ತಮ್ಮ ನಾಲ್ಕು ಜಮೀನನ್ನು ಪಂಚಾಯಿತಿಗೆ ದಾನವಾಗಿ ನೀಡಿದ್ದು, ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗುಪ್ತ ಕಾಶಿಯಲ್ಲಿರುವ ಗೌರಿ ಶಂಕರ ದೇವಸ್ಥಾನಕ್ಕೆ 1200 ಮೀಟರ್ ಹಾಗೂ 10 ಅಡಿ ಅಗಲದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ.
ಪಂಚಾಯಿತಿ ಅನುದಾನದಲ್ಲಿ ಶೀಘ್ರವೇ ರಸ್ತೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಪಂಚಾಯಿತಿ ಸದಸ್ಯ ಹಾಗೂ ರೈತ ಗುಲಾಂ ರಸೂಲ್ ಮಾತನಾಡಿ, ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ರಸ್ತೆ ಇಲ್ಲ, ಇದರ ಜತೆಗೆ ಈ ಬಗ್ಗೆ ಸಮಾಜದಲ್ಲಿ ದ್ವೇಷ ತುಂಬುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್ ನಿರ್ಮಾಣ
ಕೋಮು ಸೌಹಾರ್ದತೆ ಕಾಪಾಡಲು ಇತ್ತೀಚೆಗೆ ಪಂಚಾಯಿತಿ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ, ಭೂಮಾಲೀಕರಾದ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್ ಅವರು ತಮ್ಮ ಜಮೀನಿನ ಕೆಲವು ಭಾಗಗಳನ್ನು ರಸ್ತೆಗಾಗಿ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ದೇವಾಲಯದ ಜೀರ್ಣೋದ್ಧಾರದ ಸಿದ್ಧತೆಗಳು ನಡೆಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ದೇವಾಲಯಕ್ಕೆ ರಸ್ತೆ ಇಲ್ಲವೆಂದು ಆಗಬಾರದು ಎಂದು ಅಧಿಕಾರಿಗಳಿಗೆ ಈ ಭೂಮಿಯ ಎಲ್ಲ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ