
ನವದೆಹಲಿ, ಜನವರಿ 29: ಬೌದ್ಧ ಧರ್ಮ(Buddhism)ಕ್ಕೆ ಮತಾಂತರ(Conversion)ಗೊಂಡು ಅಲ್ಪಸಂಖ್ಯಾತ ಕೋಟಾದಡಿ ವೈದ್ಯಕೀಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಮೇಲ್ಜಾತಿಯ ವಿದ್ಯಾರ್ಥಿಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಪಸಂಖ್ಯಾತ ಕೋಟಾದಡಿ ಪ್ರವೇಶ ಬೇಕೆಂದು ಕೊನೇ ಹಂತದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಅಂಥಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕೆ ಎಂದು ಪ್ರಶ್ನಿಸಿದೆ. ಈ ಕ್ರಮವು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ ಪಡೆಯುವ ಪ್ರಯತ್ನದಂತೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಬೌದ್ಧ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದು ಘೋಷಿಸಲಾದ ಉತ್ತರ ಪ್ರದೇಶದ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ ಬೌದ್ಧ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆಯಲು ನಿರ್ದೇಶನಗಳನ್ನು ಕೋರಿ ಹರಿಯಾಣದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರು ತಾವು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇವೆಂದು ಹೇಳಿಕೊಂಡು, ಬೌದ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಉಪವಿಭಾಗಾಧಿಕಾರಿ ನೀಡಿದ ಪ್ರಮಾಣಪತ್ರಗಳನ್ನು ಹಾಜರುಪಡಿಸಿದರು.
ಮತ್ತಷ್ಟು ಓದಿ: ಗದಗದಲ್ಲಿ ಇಸ್ಲಾಂ ಧರ್ಮಕ್ಕೆ ಹಿಂದೂ ಯುವಕನ ಮತಾಂತರ ಆರೋಪ: ಅಷ್ಟಕ್ಕೂ ಆಗಿದ್ದೇನು?
ಅರ್ಜಿದಾರರು ಪುನಿಯಾ ಜಾತಿಗೆ ಸೇರಿದವರು ಎಂದು ಗಮನಿಸಿದ ಸಿಜೆಐ ಸೂರ್ಯ ಕಾಂತ್, ಪುನಿಯಾಗಳು ಪರಿಶಿಷ್ಟ ಜಾತಿ ವರ್ಗದಲ್ಲಿ ಇರಬಹುದು, ಪುನಿಯಾಗಳು ಜಾಟ್ ಕೂಡ ಆಗಿರಬಹುದು, ಅದು ಸಾಮಾನ್ಯ ವರ್ಗ. ನೀವು ಯಾವ ಪುನಿಯಾ? ಎಂದು ಕೇಳಿದರು. ಅವರು ಜಾಟ್ ಎಂದು ವಕೀಲರು ಉತ್ತರಿಸಿದರು ಹಾಗಾದರೆ ನೀವು (ಅಲ್ಪಸಂಖ್ಯಾತರು) ಹೇಗೆ ಆಗುತ್ತೀರಿ ಎಂದು ಸಿಜೆಐ ಕೇಳಿದರು.
ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ, ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಬಹುದು ಎಂದು ವಕೀಲರು ಉತ್ತರಿಸಿದರು. ಇದು ವಂಚನೆಯ ಮತ್ತೊಂದು ಮಾರ್ಗ, ನೀವು ಕೆಲವು ನಿಜವಾದ ಪ್ರಾಮಾಣಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದೀರ, ನೀವು ಶ್ರೀಮಂತ, ಉತ್ತಮ ಸ್ಥಾನಮಾನ ಹೊಂದಿರುವ, ಮೇಲ್ಜಾತಿಯ ಸಮುದಾಯಗಳಲ್ಲಿ ಒಬ್ಬರು, ಕೃಷಿ ಭೂಮಿಯನ್ನು ಹೊಂದಿರುವ ಮತ್ತು ಸೌಲಭ್ಯಗಳನ್ನು ಹೊಂದಿರುವ, ನೀವು ನಿಮ್ಮ ಅರ್ಹತೆಯ ಬಗ್ಗೆ ಹೆಮ್ಮೆ ಪಡಬೇಕು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ