ದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ AAP ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮನೆ ಮನೆಗೆ ಪಡಿತರ ವಿತರಣೆ ಮಾಡುವ ನೂತನ ಯೋಜನೆಯ ಹೆಸರಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರದ ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಯಾವುದೇ ಹೆಸರಿಲ್ಲದೆ ನಾವು ಅರ್ಹರ ಮನೆಗೆ ಪಡಿತರ ವಿತರಣೆ ಮಾಡುತ್ತೇವೆ ಎಂದು ಇಂದು (ಮಾರ್ಚ್ 20) ಹೇಳಿದ್ದಾರೆ. ಸದರಿ ಯೋಜನೆಗೆ ‘ಘರ್ ಘರ್ ರೇಷನ್ ಯೋಜನಾ’ ಎಂದು ಹೆಸರಿಸಲಾಗಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 100 ಮನೆಗಳಿಗೆ ಪಡಿತರ ವಿತರಿಸಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎಂದು ಆಹಾರ ಇಲಾಖೆ ಸಚಿವ ಇಮ್ರಾನ್ ಹುಸೈನ್ ತಿಳಿಸಿದ್ದರು. ಆದರೆ, ಯೋಜನೆಯ ಹೆಸರಿನ ಕುರಿತಾಗಿ ಕೇಂದ್ರ ಸರ್ಕಾರ ಆಕ್ಷೇಪ ಸೂಚಿಸಿತ್ತು.
ಯೋಜನೆಯ ಹೆಸರಲ್ಲಿ ‘ಮುಖ್ಯಮಂತ್ರಿ’ ಎಂದು ಇರುವುದಕ್ಕೆ ಅಸಮ್ಮತಿ ಸೂಚಿಸಿ ಕೇಂದ್ರ ನಿನ್ನೆ (ಮಾರ್ಚ್ 19) ಪತ್ರ ಬರೆದಿದೆ. ದೆಹಲಿ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ, ಯೋಜನೆಯನ್ನು ‘ಮುಖ್ಯಮಂತ್ರಿ ಯೋಜನಾ’ ಎಂದು ಕರೆಯಬಾರದು ಎಂದು ಸೂಚಿಸಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಬಗ್ಗೆ ನಾನು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಯೋಜನೆಯ ಹೆಸರನ್ನು ತೆಗೆಯಲು ಸೂಚಿಸಿದ್ದೇನೆ. ಯಾವುದೇ ಹೆಸರಿಲ್ಲದೆ ನಾವು ಅರ್ಹರ ಮನೆಗೆ ಪಡಿತರ ವಿತರಣೆ ಮಾಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮಾರ್ಚ್ 20) ಹೇಳಿದ್ದಾರೆ.
ಮನೆ ಮನೆಗೆ ಪಡಿತರ ವಿತರಣೆ ಮಾಡುವ ದೆಹಲಿ ಸರ್ಕಾರದ ಯೋಜನೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 25ರಂದು ಚಾಲನೆ ನೀಡಲಿದ್ದಾರೆ. ಯೋಜನೆಗೆ ಸಂಬಂಧಿಸಿ ಸೀಮಾಪುರಿ ಭಾಗದ ನಿಯಮಿತ ಸಂಖ್ಯೆಯ ಫಲಾನುಭವಿಗಳ ಮನೆಗಳಿಗೆ ಪಡಿತರ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಇಮ್ರಾನ್ ಹುಸೈನ್ ಮಾರ್ಚ್ 12ರಂದು ಹೇಳಿದ್ದರು. ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರ ಪಡಿತರ ಮತ್ತು ಬಯೋಮೆಟ್ರಿಕ್ ವಿವರ ಸಿದ್ಧಪಡಿಸಿ ಇಡುವಂತೆ ಸರ್ಕಾರ ಆಯಾ ಇಲಾಖೆಗಳಿಗೆ ಸೂಚನೆ ನೀಡಿತ್ತು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 100 ಮನೆಗಳಿಗೆ ಪಡಿತರ ವಿತರಿಸಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಇಮ್ರಾನ್ ಹುಸೈನ್, ಏಪ್ರಿಲ್ 1ರ ಬಳಿಕ ಈ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲಾಗುವುದು. ರಾಷ್ಟ್ರ ರಾಜಧಾನಿಯ ಇತರಡೆಗೂ ಈ ಯೋಜನೆ ತಲುಪಿಸಲಾಗುವುದು ಎಂದು ಹೇಳಿದ್ದರು.
ಮನೆ ಮನೆಗೆ ಪಡಿತರ, ಬಯೋಮೆಟ್ರಿಕ್ ವೆರಿಫಿಕೇಷನ್ ನಂತರ ಆರಂಭ
ಮನೆ ಮನೆಗೆ ಪಡಿತರ ಸಾಮಾಗ್ರಿಗಳನ್ನು ಒದಗಿಸುವ ಈ ಯೋಜನೆಯನ್ನು ದೆಹಲಿ ಸರ್ಕಾರ ಕಳೆದ ತಿಂಗಳೇ ಪರಿಚಯಿಸಿತ್ತು. ಯೋಜನೆಯ ಪ್ರಕಾರ ಪ್ರತಿ ಫಲಾನುಭವಿ ಮನೆಗಳಿಗೆ ಪಡಿತರ ಸಾಮಾಗ್ರಿಗಳು ಸರಬರಾಜು ಆಗಲಿದೆ. ಗೋಧಿ, ಅಕ್ಕಿ ಮನೆ ಮನೆಗೆ ತಲುಪಲಿದೆ. ಈ ಯೋಜನೆಗಾಗಿ ಬಯೋಮೆಟ್ರಿಕ್ ವೆರಿಫಿಕೇಷನ್ ಆಗಬೇಕಿದೆ.
ಗಣರಾಜ್ಯೋತ್ಸವ ದಿನದಂದು ಮಾತನಾಡಿದ್ದ ಆಮ್ ಆದ್ಮಿ ಪಾರ್ಟಿ (AAP) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೆ ಮನೆಗೆ ಪಡಿತರ ವಿತರಿಸುವ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದರು. ವರ್ಷಾಂತ್ಯದ ಒಳಗೆ ನಗರದ ಪ್ರತಿಯೊಬ್ಬರಿಗೂ ಆರೋಗ್ಯ ಕಾರ್ಡ್ (Health Card) ನೀಡುವ ಕುರಿತು ಹೇಳಿದ್ದರು.
ಇದನ್ನೂ ಓದಿ: 2048 ರ ಒಲಿಂಪಿಕ್ಸ್ ಆಯೋಜಿಸುವುದು ನಮ್ಮ ಕನಸು: ಅರವಿಂದ್ ಕೇಜ್ರಿವಾಲ್
ನಾನು ರಾಮ ಮತ್ತು ಹನುಮನ ಭಕ್ತ; ರಾಮ ರಾಜ್ಯದಿಂದ ಸ್ಫೂರ್ತಿ ಪಡೆದ 10 ಅಂಶ ಪಟ್ಟಿ ಮಾಡಿದ ಅರವಿಂದ್ ಕೇಜ್ರಿವಾಲ್
Published On - 4:39 pm, Sat, 20 March 21