ದೆಹಲಿ: ವಿಮಾನ ಹತ್ತಲು ಸಿದ್ಧರಾಗಿದ್ದ 35 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಸ್ಕೂಟ್ ಏರ್ಲೈನ್ಸ್ನ (Scoot Airlines) ವಿಮಾನವು ಅಮೃತಸರದಿಂದ ಸಿಂಗಪುರಕ್ಕೆ ಬುಧವಾರ (ಜ 18) ಹಾರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಗರಿಕ ವಿಮಾನಯಾನದ ಮಹಾ ನಿಯಂತ್ರಕರು (Directorate General of Civil Aviation – DGCA) ತನಿಖೆಗೆ ಆದೇಶಿಸಿದ್ದಾರೆ. ಬುಧವಾರ ಸಂಜೆ 7.55ಕ್ಕೆ ವಿಮಾನವು ಸಿಂಗಪುರಕ್ಕೆ ಹಾರಬೇಕಿತ್ತು. ಆದರೆ ಸಂಜೆ 3 ಗಂಟೆಗೇ ವಿಮಾನವು ಹಾರಾಟ ಆರಂಭಿಸಿತು. ಇದರಿಂದಾಗಿ ವಿಮಾನ ಹತ್ತಬೇಕಿದ್ದ 35 ಮಂದಿ ವಿಮಾನ ನಿಲ್ದಾಣ ತಲುಪಿದರೂ ಪ್ರಯೋಜನವಾಗಲಿಲ್ಲ.
ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಲ್ಲದೆ ಪ್ರತಿಭಟನೆಯನ್ನೂ ನಡೆಸಿದರು. ಇತ್ತೀಚೆಗಷ್ಟೇ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ‘ಗೋಫಸ್ಟ್’ ಕಂಪನಿಯ ವಿಮಾನವು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ
ಬೆಂಗಳೂರು: ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’ (Go First) ಕಂಪನಿಯ ವಿಮಾನವು ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (KIAL) ಬಿಟ್ಟು ಹಾರಿದೆ. ಈ ಸಂಗತಿಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ‘ಈ ಕಂಪನಿಯ ಸಿಬ್ಬಂದಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ? ಕೊನೆಯ ಕ್ಷಣದ ತಪಾಸಣೆ ಎಂಬುದು ಇರುವುದಿಲ್ಲವೇ? ತೂಕಡಿಸುತ್ತಾ ವಿಮಾನ ಹಾರಿಸುತ್ತಾರಾ’ ಎಂದೆಲ್ಲಾ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದೆ.
ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಿದ್ದೆವು. ಗೋ ಫಸ್ಟ್ ಕಂಪನಿಯ G8-116 ವಿಮಾನದಲ್ಲಿ ದೆಹಲಿಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದೆವು. ಬಸ್ಸುಗಳಲ್ಲಿ ನಮ್ಮನ್ನು ವಿಮಾನ ನಿಂತಿದ್ದ ಸ್ಥಳಕ್ಕೆ ಕರೆದೊಯ್ಯಲಾಯಿತು. ಮೊದಲ ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಮಾನ ಹತ್ತಿದ ತಕ್ಷಣವೇ ವಿಮಾನವೂ ಹಾರಾಟ ಆರಂಭಿಸಿತು. ಇದು ಸೋಮವಾರ ಮುಂಜಾನೆ 6.40ಕ್ಕೆ ದೆಹಲಿಯತ್ತ ಹೊರಟಿತು ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.
‘ಬೆಂಗಳೂರು-ದೆಹಲಿ ಮಾರ್ಗದ ವಿಮಾನವು ಪ್ರಯಾಣಿಕರು ಹತ್ತುವ ಮೊದಲೇ ಹಾರಾಟ ಅರಂಭಿಸಿತು! ಒಂದು ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದ ಸಮೀಪವೇ ಬಂದಿದ್ದರು. ಕನಿಷ್ಠ ತಪಾಸಣೆಗಳೂ ಇಲ್ಲದೆ ಇವರು ಕೆಲಸ ಮಾಡುತ್ತಿದ್ದಾರಾ’ ಎಂದು ಸತೀಶ್ ಕುಮಾರ್ ಎನ್ನುವ ಪ್ರಯಾಣಿಕರು ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ