ಬುರ್ಖಾ ಹಾಕಿದ ಯುವತಿಯರಿಗೆ ಕಾಲೇಜಿನೊಳಗೆ ಪ್ರವೇಶವಿಲ್ಲ; ಉತ್ತರ ಪ್ರದೇಶದಲ್ಲಿ ಡ್ರೆಸ್ ಕೋಡ್ ವಿವಾದ

2022ರ ಜನವರಿಯಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯುಸಿಯ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆಗಳು ನಡೆಸಿದ್ದರು.

ಬುರ್ಖಾ ಹಾಕಿದ ಯುವತಿಯರಿಗೆ ಕಾಲೇಜಿನೊಳಗೆ ಪ್ರವೇಶವಿಲ್ಲ; ಉತ್ತರ ಪ್ರದೇಶದಲ್ಲಿ ಡ್ರೆಸ್ ಕೋಡ್ ವಿವಾದ
ಬುರ್ಖಾImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 19, 2023 | 10:16 AM

ಮೊರಾದಾಬಾದ್: ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‌ನಲ್ಲಿರುವ ಹಿಂದೂ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಸಮವಸ್ತ್ರದ (Uniform) ಬದಲು ಬುರ್ಖಾ ಧರಿಸಿಕೊಂಡು ಬಂದಿದ್ದಕ್ಕಾಗಿ ಅವರಿಗೆ ಕಾಲೇಜಿನೊಳಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ತಮಗೆ ಬುರ್ಖಾ ಧರಿಸಿ ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸಲು ಬಿಡುತ್ತಿಲ್ಲ, ಗೇಟ್‌ನಲ್ಲಿ ಬುರ್ಖಾವನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹುಡುಗಿಯರು ಆರೋಪಿಸಿದ್ದಾರೆ.

ಈ ವಿಷಯದ ಬಗ್ಗೆ ವಿದ್ಯಾರ್ಥಿಗಳು, ಸಮಾಜವಾದಿ ಛಾತ್ರ ಸಭಾ ಕಾರ್ಯಕರ್ತರು ಮತ್ತು ಕಾಲೇಜು ಪ್ರಾಧ್ಯಾಪಕರ ನಡುವೆ ಮಾತಿನ ಚಕಮಕಿ ನಡೆಯಿತು. ಹಿಂದೂ ಕಾಲೇಜಿನ ಈ ಬಿಸಿ ಬಿಸಿ ಚರ್ಚೆಯ ದೃಶ್ಯದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಕಾಲೇಜಿನಲ್ಲಿ ಎಲ್ಲರಿಗೂ ಡ್ರೆಸ್​ಕೋಡ್ ಇದೆ. ಕಾಲೇಜಿನ ಯೂನಿಫಾರಂ ಹಾಕಿಕೊಂಡು ಬಂದರೆ ಮಾತ್ರ ಕಾಲೇಜಿನೊಳಗೆ ಪ್ರವೇಶ ನೀಡಲಾಗುವುದು. ಕಾಲೇಜಿನ ನಿಯಮ ಮೀರಿದವರಿಗೆ ಒಳಗೆ ಪ್ರವೇಶವಿಲ್ಲ ಎಂದು ಕಾಲೇಜು ಪ್ರಾಧ್ಯಾಪಕರು ಆ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಈ ದೇಶದಲ್ಲಿ ಬುರ್ಖಾ ಧರಿಸುವ ಮಹಿಳೆಯರಿಗೆ 83,000 ರೂ. ದಂಡ!

ಇದಕ್ಕೆ ಸಮಾಜವಾದಿ ಛಾತ್ರ ಸಭಾದ ಸದಸ್ಯರು ಕಾಲೇಜಿಗೆ ಡ್ರೆಸ್ ಕೋಡ್‌ನಲ್ಲಿ ಬುರ್ಖಾವನ್ನು ಸೇರಿಸಲು ಮತ್ತು ಹುಡುಗಿಯರು ತಮ್ಮ ತರಗತಿಗಳಿಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

2022ರ ಜನವರಿಯಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯುಸಿಯ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆಗಳು ನಡೆಸಿದ್ದರು. ಈ ಪ್ರತಿಭಟನೆ ಇಡೀ ದೇಶಾದ್ಯಂತ ವ್ಯಾಪಿಸಿ ದೊಡ್ಡ ವಿವಾದವಾಗಿತ್ತು.

ಈ ಘಟನೆ ಹಿನ್ನೆಲೆಯಲ್ಲಿ ವಿಜಯಪುರದ ಶಾಂತೇಶ್ವರ ಶಿಕ್ಷಣ ಟ್ರಸ್ಟ್‌ಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ವಸ್ತ್ರ ಧರಿಸಿ ಆಗಮಿಸಿದ್ದರು. ಉಡುಪಿ ಜಿಲ್ಲೆಯ ಹಲವು ಕಾಲೇಜುಗಳಲ್ಲೂ ಇದೇ ಸ್ಥಿತಿ ಇತ್ತು. ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರವೇ ವಿದ್ಯಾರ್ಥಿಗಳು ಧರಿಸಬಹುದಾಗಿದ್ದು, ಇತರೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ವಿಶ್ವವಿದ್ಯಾಲಯ ಪೂರ್ವ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು.

ಇದನ್ನೂ ಓದಿ: ಬುರ್ಖಾ ಧರಿಸಿ ಸ್ವಿಗ್ಗಿ ಬ್ಯಾಗ್​ನೊಂದಿಗೆ ಹೊರಟಿರುವ ಈ ಮಹಿಳೆಯ ಕಥೆ ಬೇರೆಯೇ ಇದೆ

ನಂತರ ಈ ವಿಷಯ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ನ ನಿಷೇಧವನ್ನು ಪ್ರಶ್ನಿಸುವ ವಿವಿಧ ಅರ್ಜಿಗಳನ್ನು ಹೈಕೋರ್ಟ್​ ವಜಾಗೊಳಿಸಿತ್ತು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿತ್ತು. ಅಕ್ಟೋಬರ್ 13ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಭಜನೆಯ ತೀರ್ಪು ಪ್ರಕಟಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ