ಕೊವಿಡ್ 19 ಪ್ರಕರಣಗಳು (Covid 19 Cases) ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಇಂದು ನಗರದಲ್ಲಿ ಸೆಕ್ಷನ್ 144 (Section 144 in Mumbai)ಹೇರಿದ್ದಾರೆ. ಇಂದಿನಿಂದ ಜನವರಿ 7ರವರೆಗೆ ಈ ಸೆಕ್ಷನ್ 144 ಜಾರಿಯಲ್ಲಿ ಇರಲಿದೆ. ಈ ಹೊಸ ಕೊವಿಡ್ 19 ನಿಯಂತ್ರಣ ಕ್ರಮದ ಅನ್ವಯ, ಹೊಸವರ್ಷದ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಡಿ.30ರಿಂದ ಜನವರಿ 7ರವರೆಗೆ ಮುಂಬೈನ ಯಾವುದೇ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್, ರೆಸಾರ್ಟ್ ಮತ್ತು ಕ್ಲಬ್ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ತೆರೆದ ಅಥವಾ ಮುಚ್ಚಿದ ಪ್ರದೇಶಗಳಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನಗರ ಪೊಲೀಸ್ ಆಯುಕ್ತರು ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಜನವರಿ 7ರವರೆಗೂ ಇದು ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದವರಿಗೆ, ಭಾರತೀಯ ದಂಡ ಸಂಹಿತೆ 1860ರ, ಸೆಕ್ಷನ್ 188ರಡಿಯಲ್ಲಿ ಶಿಕ್ಷೆ ಕಟ್ಟಿಟ್ಟಬುತ್ತಿ. ಅಷ್ಟೇ ಅಲ್ಲ, ಉಲ್ಲಂಘಿಸುವ ವ್ಯಕ್ತಿಯ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಅನ್ವಯ ಆಗುವ ಇತರ ಕಾನೂನುಗಳಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡೆಪ್ಯೂಟಿ ಕಮಿಷನರ್ ಪೊಲೀಸ್ ಚೈತನ್ಯ ತಿಳಿಸಿದ್ದಾರೆ. ಹೆಚ್ಚುತ್ತಿರುವ ಒಮಿಕ್ರಾನ್ ಮತ್ತು ಕೊವಿಡ್ 19 ಸೋಂಕಿನ ಮಧ್ಯೆ ಈ ಹೊಸವರ್ಷವೂ ಬಂದಿದೆ. ಹಾಗಾಗಿ ಹೊಸವರ್ಷದಂದು ಸಾಧ್ಯವಾದಷ್ಟು ಆಚರಣೆಯನ್ನು ತಡೆಯಬೇಕು. ಈ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಲು ಆಯಾ ಆಡಳಿತಗಳು ಮುಂದಾಗಿವೆ. ಬರೀ ಮುಂಬೈ ಅಷ್ಟೇ ಅಲ್ಲ, ರಾಷ್ಟ್ರ ರಾಜಧಾನಿ ದೆಹಲಿ ಕಠಿಣ ನಿಯಮಗಳನ್ನು ಹೇರಿದೆ. ಅಲ್ಲಿ ಶಾಲಾ-ಕಾಲೇಜು, ಜಿಮ್, ಸಿನಿಮಾ ಹಾಲ್ಗಳೆಲ್ಲ ಮತ್ತೆ ಬಂದ್ ಆಗಿವೆ.
ಇನ್ನು ಮುಂಬೈನಲ್ಲಿ ಬುಧವಾರ ಒಂದೇ ದಿನ 2510 ಕೊರೊನಾ ಕೇಸ್ಗಳು ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ ಮುಂಬೈನಲ್ಲಿ 8060 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣ ಶೇ.97ರಷ್ಟಿದೆ. ಒಟ್ಟು 45 ಕಟ್ಟಗಳನ್ನು ಸೀಲ್ಡೌನ್ ಮಾಡಲಾಗಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಜಾಸ್ತಿಯಿದೆ. ಇನ್ನು ಕೊವಿಡ್ 19 ಸೋಂಕಿನ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಬೃಹ್ಮನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ಅಧಿಕಾರಿಗಳ ಜತೆ ಸಭೆ ಕೂಡ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ: ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದ ಸುರ್ಜೇವಾಲ