ದೆಹಲಿ: ಕೊರೊನಾ ಲಸಿಕೆ ಕುರಿತು ಎಲ್ಲಾ ದೇಶಗಳು ಒಂದಿಲ್ಲೊಂದು ಚಿಂತೆಯಲ್ಲಿವೆ. ಕೆಲವು ದೇಶಗಳಿಗೆ ಕೊರೊನಾ ಲಸಿಕೆ ಬಳಸಲು ಅನುಮತಿಯೇ ಸಿಕ್ಕಿಲ್ಲ ಎಂಬ ಚಿಂತೆಯಾದರೆ, ಅನುಮತಿ ಪಡೆದ ದೇಶಗಳಿಗೆ ಲಸಿಕೆಯ ಅಡ್ಡಪರಿಣಾಮಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆ. ಈ ನಡುವೆ ಪುಣೆಯಲ್ಲಿರುವ ಭಾರತೀಯ ಔಷಧ ತಯಾರಿಕಾ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲ ಔಷಧ ತಯಾರಕರಿಗೆ ಕಾನೂನು ಕಟ್ಟಳೆಗಳಿಂದ ವಿನಾಯಿತಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಕೊರೊನಾ ಲಸಿಕೆ ತಯಾರಿಸುತ್ತಿರುವ ಸಂಸ್ಥೆಗಳಿಗೆ ನೈತಿಕ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಅತ್ಯಗತ್ಯ. ಹೀಗಾಗಿ ಕೊವಿಡ್ ಸೋಂಕಿತರಿಗೆ ಲಸಿಕೆಗಳಿಂದ ಯಾವುದೇ ಅಡ್ಡಪರಿಣಾಮಗಳಾದರೂ ಅದಕ್ಕೆ ಕಾನೂನು ರಕ್ಷಣೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕೊರೊನಾ ಲಸಿಕೆ ಪ್ರಯೋಗ ಸಂದರ್ಭದಲ್ಲಿ ಪ್ರಯೋಗಕ್ಕೆ ಒಳಪಟ್ಟವರೊಬ್ಬರು ಅಡ್ಡಪರಿಣಾಮದ ಆರೋಪ ಹೊರಿಸಿ ಸೀರಮ್ ಸಂಸ್ಥೆಯಿಂದ 5 ಕೋಟಿ ಪರಿಹಾರ ಕೇಳಿದ್ದರು. ಇದೇ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ ಪೂನಾವಾಲ ಈಗ ಕಾನೂನು ಕಟ್ಟಳೆಗಳಿಂದ ರಕ್ಷಣೆ ನೀಡಲು ಮನವಿ ಮಾಡಿದ್ದಾರೆ.
ಈ ಕುರಿತು ಸೀರಮ್ ಸಂಸ್ಥೆ ಶೀಘ್ರದಲ್ಲೇ ಕೇಂದ್ರ ಸರ್ಕಾರದ ಮುಂದೆ ಲಿಖಿತ ರೂಪದ ಬೇಡಿಕೆ ಸಲ್ಲಿಸಲಿದೆ. ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಲಸಿಕೆ ತಯಾರಿಕರಿಗೆ ಕಾನೂನು ರಕ್ಷಣೆ ನೀಡಿವೆ. ಇದನ್ನೇ ಮಾದರಿಯಾಗಿರಿಸಿಕೊಂಡು ಭಾರತದಲ್ಲಿಯೂ ನಿಯಮ ಸಡಿಲಿಸಲು ಕೇಂದ್ರ ಸರ್ಕಾರ ಯೋಚಿಸಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆ ತಯಾರಿಯಲ್ಲಿ ತೊಡಗಿರುವ ಅದಾರ್ ಪೂನಾವಾಲಾ.. ಏಷಿಯನ್ ಆಫ್ ದಿ ಇಯರ್