ದೆಹಲಿ: ದೇಶದಲ್ಲೀಗ ಚಳಿಯ ಆರ್ಭಟ ಶುರುವಾಗಿದೆ. ರಾಷ್ಟ್ರದ ಬಹುತೇಕ ಭಾಗಗಳಲ್ಲಿ ವಿಪರೀತ ಚಳಿ ಬೀಳುತ್ತಿದ್ದು, ದೆಹಲಿಯಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಜನರು ನಡುಗುತ್ತಿದ್ದಾರೆ. ಸೋಮವಾರ ಸಫ್ದರ್ಜಂಗ್ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಅಲ್ಲಿ 3.2 ಡಿಗ್ರಿ ಸೆಲ್ಸಿಯಸ್ನಷ್ಟು ಶೀತಗಾಳಿ ಬೀಸುತ್ತಿದೆ. ಲೋಧಿ ರಸ್ತೆಯಲ್ಲಿ 3.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮಧ್ಯೆ ಬುಧವಾರದವರೆಗೂ ವಾಯುವ್ಯ ಭಾರತದ ಭಾಗಗಳಲ್ಲಿ ಗಂಭೀರ ಸ್ವರೂಪದ ಚಳಿ(Severe Cold)ಯ ವಾತಾವರಣ ಮುಂದುವರಿಯಲಿದೆ. ವಾತಾವರಣ ಏನೇ ಬದಲಾವಣೆಯಾಗುವುದಿದ್ದರೂ ಅದು ಬುಧವಾರದ ನಂತರವೇ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ಪಾಶ್ಚಿಮಾತ್ರ ಅಡಚಣೆಗಳು ಹಿಮಾಲಯದ ಪಶ್ಚಿಮ ಭಾಗಗಳ ಮೇಲೆ ಪರಿಣಾಮ ಬೀರಲಿದ್ದು, ಆ ಪ್ರದೇಶಗಳಲ್ಲಿ ಹಗುರ ಮತ್ತು ಚದುರಿದ ಮಳೆಯನ್ನೂ ತರಲಿವೆ. ಈ ಮಳೆಯಿಂದ ಶೀತ ಅಲೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನದಲ್ಲಿ ಯಾವುದೇ ಬದಲಾವಣೆಯೂ ಕಂಡುಬರುವುದಿಲ್ಲ ಎಂದು ಹೇಳಿದೆ. ಅದರಲ್ಲೂ ವಾಯುವ್ಯ ಭಾರತದಾದ್ಯಂತ ಕನಿಷ್ಠ ತಾಪಮಾನ 3 ರಿಂದ 5ಡಿಗ್ರಿ ಸೆಲ್ಸಿಯಸ್ಗೆ ಮತ್ತು ಪೂರ್ವ ಭಾರತದಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಎರಡನೇ ಪಾಶ್ಚಿಮಾತ್ಯ ಅಡಚಣೆ ಸಕ್ರಿಯವಾಗಿದ್ದು, ಬಯಲು ಪ್ರದೇಶದಲ್ಲಿ ಚದುರಿದ ಮತ್ತು ಲಘು ಮಳೆಗೆ ಕಾರಣವಾಗಬಹುದು. ಮುಂಬರುವ ಪಾಶ್ಚಿಮಾತ್ರ ಅಡೆತಡೆಗಳಿಂದಾಗಿ, ಇದೀಗ ಉಂಟಾಗಿರುವ ಶೀತ ಅಲೆಗಳನ್ನು ಡಿ.22ರಿಂದ 27ರವರೆಗೆ ಸ್ಥಗಿತಗೊಳ್ಳಬಹುದು. ಆದರೆ ಮೋಡಗಳಿಂದಾಗಿ ದಿನದ ತಾಪಮಾನವು ಸಾಮಾನ್ಯಕ್ಕಿಂತಲೂ ಕಡಿಮೆ ಇರುತ್ತದೆ. ಹೀಗಾಗಿ ಶೀತಗಾಳಿ ಎಷ್ಟರಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ.ಜೇನಾಮನಿ ತಿಳಿಸಿದ್ದಾರೆ.
ಮುಂದುವರಿಯಲಿದೆ ಮಳೆ
ಬುಧವಾರದಿಂದ ಶನಿವಾರದವರೆಗೂ ಹಿಮಾಲಯ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಅಲ್ಲಲ್ಲಿ ಚದುರಿದ ಮಳೆ, ಹಿಮಪಾತ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಆಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಗಳಲ್ಲಿ ಇಂದಿನಿಂದ ಶುಕ್ರವಾರದವರೆಗೆ ಗುಡುಗು ಸಹಿತ ಹಗುರ, ಚದುರಿದ, ಕೆಲವೊಮ್ಮೆ ಜೋರಾದ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ. ಒಟ್ಟಾರೆ ದೇಶದಲ್ಲಿ ವಿಪರೀತ ಚಳಿಯ ನಡುವೆಯೂ ಮಳೆಯೂ ಬೀಳಲಿದೆ.
Published On - 9:35 am, Tue, 21 December 21