Union Budget 2022: ವಿವಿಧ ಉದ್ಯಮಿಗಳ ಜತೆ ಪೂರ್ವ ಬಜೆಟ್​ ಸಂವಾದ ನಡೆಸಿದ ಪ್ರಧಾನಿ ಮೋದಿ; ಹೂಡಿಕೆ ಉತ್ತೇಜನಕ್ಕೆ ಸಿಇಒಗಳಿಂದ ಸಲಹೆ

ಆರ್ಥಿಕತೆಗೆ ಸಂಬಂಧಪಟ್ಟಂತೆ ನಾವು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂಬರುವ ಬಜೆಟ್​ಗೆ ಸಹಕಾರಿಯಾಗುವ ಹಲವು ವಿಚಾರಗಳನ್ನು ಸಿಇಒಗಳು ಹಂಚಿಕೊಂಡರು ಎಂದು ಪಿಎಂ ಮೋದಿ ಹೇಳಿದ್ದಾರೆ.

Union Budget 2022: ವಿವಿಧ ಉದ್ಯಮಿಗಳ ಜತೆ ಪೂರ್ವ ಬಜೆಟ್​ ಸಂವಾದ ನಡೆಸಿದ ಪ್ರಧಾನಿ ಮೋದಿ; ಹೂಡಿಕೆ ಉತ್ತೇಜನಕ್ಕೆ ಸಿಇಒಗಳಿಂದ ಸಲಹೆ
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
Follow us
| Updated By: Lakshmi Hegde

Updated on: Dec 21, 2021 | 8:56 AM

ದೆಹಲಿ: 2022ರ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2022-2023ನೇ ಸಾಲಿನ ಕೇಂದ್ರ ಬಜೆಟ್​ (Union Budget for 2022-23)ಮಂಡನೆ ಮಾಡಲಿದ್ದಾರೆ.  ಈ ಹಿನ್ನೆಲೆಯಲ್ಲಿ ಸೋಮವಾರ (ಡಿ.20) ಪ್ರಧಾನಿ ಮೋದಿ (PM Narendra Modi) ದೇಶದ ಉನ್ನತ ಉದ್ಯಮಿಗಳು, ಸಿಇಒಗಳ ಜತೆ ಸಂವಾದ ನಡೆಸಿ, ದೇಶದಲ್ಲಿ ಹೂಡಿಕೆ ಪ್ರಮಾಣವನ್ನು ಉತ್ತೇಜಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯುಷ್ ಗೋಯೆಲ್​ ಕೂಡ ಉಪಸ್ಥಿತರಿದ್ದರು. ಈ ಸಂವಾದದ ವೇಳೆ ಪ್ರಧಾನಿ ಮೋದಿಯವರು, ಬ್ಯಾಂಕಿಂಗ್​, ಮೂಲಸೌಕರ್ಯ, ಸ್ಟೀಲ್​, ಆಟೋಮೊಬೈಲ್​, ಟೆಲಿಕಾಂ, ಗ್ರಾಹಕ ಸರಕುಗಳು, ಜವಳಿ, ನವೀಕರಿಸಬಹುದಾದ ಉತ್ಪನಗಳ ಉದ್ಯಮ, ಆತಿಥ್ಯ, ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಎಲೆಕ್ಟ್ರಾನಿಕ್​ ಸೇರಿ ವಿವಿಧ ಕೈಗಾರಿಕೆಗಳ ಒಟ್ಟು 20 ಕಂಪನಿಗಳ ಸಿಇಒಗಳ ಸಲಹೆಯನ್ನು ಕೇಳಿದ್ದಾರೆ.

ನಂತರ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವಂತಹ ಅನುಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ.  ಕೈಗಾರಿಕೆಗಳ ಅಭಿವೃದ್ಧಿಗೊಳಿಸುವುದು ನಮ್ಮ ಸರ್ಕಾರದ ಇಚ್ಛೆಯಾಗಿದೆ. ಹೀಗಾಗಿ ಅದರಲ್ಲಿ ಹೂಡಿಕೆಯನ್ನು ಮಂದುವರಿಸಿ, ರಿಸ್ಕ್​ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದರು.  ಹಾಗೇ, ವಿಶ್ವದ ಪ್ರತಿ ವಲಯಗಳಲ್ಲೂ ನಮ್ಮ ಭಾರತದ ಕೈಗಾರಿಕೋದ್ಯಮ ಅಗ್ರವಾದ, ಪ್ರಮುಖ ಐದು ಸ್ಥಾನಗಳಲ್ಲಿ ಒಂದರಲ್ಲಿ ಇರಬೇಕು ಎಂಬುದು ನಮ್ಮ ಬಲವಾದ ಇಚ್ಛೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿಯವರು ಸಂವಾದದಲ್ಲಿ ಹೇಳಿದ್ದಾಗಿ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಹಾಗೇ, ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯಗಳಲ್ಲಿ, ಅದರಲ್ಲೂ ನೈಸರ್ಗಿಕ ಕೃಷಿಯಲ್ಲಿ ಹೆಚ್ಚೆಚ್ಚು ಹೂಡಿಕೆ  ಮಾಡಲು ಪ್ರಧಾನಮಂತ್ರಿ ಕರೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಸಂವಾದದ ಬಗ್ಗೆ ಪ್ರಧಾನಮಂತ್ರಿ ಕಚೇರಿ ಪ್ರತ್ಯೇಕವಾಗಿಯೇ ಹೇಳಿಕೆ ಬಿಡುಗಡೆ ಮಾಡಿದೆ. ಪಿಎಂ ಗತಿಶಕ್ತಿಯಂಥ ಭವಿಷ್ಯಕ್ಕೆ ಅನುಕೂಲವಾದ ಯೋಜನೆ ಸೇರಿ, ಸರ್ಕಾರ ತೆಗೆದುಕೊಂಡಿರುವ ಇನ್ನಿತರ ಸುಧಾರಣಾ ಕ್ರಮಗಳು ಮತ್ತು ಅನಗತ್ಯ ಅಡಿಯಾಳುತನದ ಹೊರೆಯನ್ನು ಕಡಿಮೆ ಮಾಡುವ ಬಗ್ಗೆ ನರೇಂದ್ರ ಮೋದಿಯವರು ಉದ್ಯಮಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಪಿಎಂಒ ತಿಳಿಸಿದೆ. ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ವಲಯಗಳ ತಜ್ಞರೊಂದಿಗೆ ಸಂವಾದ ನಡೆಸುತ್ತಾರೆ. ಅಂತೆಯೇ ಈ ಬಾರಿಯೂ ಸಭೆ ನಡೆಸಿದ್ದಾರೆ. ಈಗಂತೂ ದೇಶಕ್ಕೆ ಕೊರೊನಾ ವೈರಸ್ ಹೊಡೆತಕೊಟ್ಟಿದೆ. ಅದರೊಂದಿಗೆ ಒಮಿಕ್ರಾನ್​ ವೈರಾಣು ಕೂಡ ಕಾಲಿಟ್ಟಿದೆ. ಹೀಗಾಗಿ ಆರ್ಥಿಕತೆ ಕೂಡ ನೆಲಕಚ್ಚಿದೆ. ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವೂ ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ.

ನಿನ್ನೆ ಸಿಇಒಗಳೊಂದಿಗೆ ಸಂವಾದ ನಡೆಸಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಆರ್ಥಿಕತೆಗೆ ಸಂಬಂಧಪಟ್ಟಂತೆ ನಾವು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂಬರುವ ಬಜೆಟ್​ಗೆ ಸಹಕಾರಿಯಾಗುವ ಹಲವು ವಿಚಾರಗಳನ್ನು ಸಿಇಒಗಳು ಹಂಚಿಕೊಂಡರು. ನಾನು ಕಳೆದ ಕೆಲವು ವರ್ಷಗಳಿಂದಲೂ ಸುಧಾರಣಾ ಪಥದಲ್ಲಿ ಸಾಗುತ್ತಿರುವ ಭಾರತದ ಬಗ್ಗೆ ಮಾತನಾಡಿದೆ ಎಂದಿದ್ದಾರೆ.  ಇನ್ನು ಪಿಎಂ ಜೊತೆ ಸಂವಾದದಲ್ಲಿ ಭಾಗವಹಿಸಿದ ಬಳಿಕ ನಮಗೆ ಧೈರ್ಯ ಬಂದಿದೆ. ಅವರ ದೂರದೃಷ್ಟಿ ನಮ್ಮಲ್ಲಿ ಭರವಸೆ ಮೂಡಿಸಿದೆ ಎಂದು ಸಿಇಒಗಳು ಹೇಳಿಕೆ ನೀಡಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಹೊಸ ಅಭಿಯಾನ