Video: ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ಬೋಟ್ನ್ನು ಬೆನ್ನಟ್ಟಿ ಹೋಗಿ, ಮಾದಕ ವಸ್ತುಗಳ ಸಾಗಣೆ ತಡೆದ ಭಾರತೀಯ ನೌಕಾಪಡೆ
ಪಾಕಿಸ್ತಾನದ ಅಲ್ ಹುಸೇನಿ ಎಂಬ ಹೆಸರಿನ ಮೀನುಗಾರಿಕಾ ದೋಣಿ ಭಾರತದ ಬದಿಯ ನೀರಿನಲ್ಲಿ ಹೋಗುತ್ತಿತ್ತು. ಅದರಲ್ಲಿ ಮಾದಕ ವಸ್ತು ಇತ್ತು ಎಂದು ಗುಜರಾತ್ ಕರಾವಳಿಯ ರಕ್ಷಣಾ ಪಿಆರ್ಒ ತಿಳಿಸಿದ್ದಾರೆ.

ಭಾರತೀಯ ನೌಕಾ ಪಡೆ ಡಿ.19ರಂದು ಗುಜರಾತ್ ಕರಾವಳಿ (Gujarat Coast)ಯಲ್ಲಿ ಭರ್ಜರಿ ಪ್ರಮಾಣದ ಮಾದಕವಸ್ತುವನ್ನು ವಶಪಡಿಸಿಕೊಂಡಿದೆ. ಪಾಕಿಸ್ತಾನಕ್ಕೆ ಸೇರಿದ ಮೀನುಗಾರಿಕಾ ಬೋಟ್ವೊಂದರಲ್ಲಿ ಆರು ಮಂದಿ ಸುಮಾರು 400 ಕೋಟಿ ರೂ.ಮೌಲ್ಯದ 77 ಕೆಜಿ ಹೆರಾಯಿನ್ನ್ನು ಸಾಗಿಸುತ್ತಿದ್ದರು. ಆ ಬೋಟ್ನ್ನು ಗುಜರಾತ್ ಕರಾವಳಿ ತೀರದಲ್ಲಿ ಭಾರತೀಯ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಮತ್ತು ಭಾರತೀಯ ನೌಕಾಪಡೆ ಸಿಬ್ಬಂದಿ ಜಂಟಿಯಾಗಿ ಹಿಡಿದಿವೆ. ಪಾಕ್ ಬೋಟ್ನ್ನು ಬೆನ್ನಟ್ಟಿ ಹೋಗಿ ಅದರಲ್ಲಿದ್ದ ಆರು ಮಂದಿಯನ್ನು ಮತ್ತು ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಕಚ್‌ನಲ್ಲಿರುವ ಜಖೌ ಮೀನುಗಾರಿಕೆ ಬಂದರಿಗೆ ತರಲಾಗಿದೆ.
ಈ ಬಗ್ಗೆ ಗುಜರಾತ್ ಕರಾವಳಿಯ ರಕ್ಷಣಾ ಪಿಆರ್ಒ ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಅಲ್ ಹುಸೇನಿ ಎಂಬ ಹೆಸರಿನ ಮೀನುಗಾರಿಕಾ ದೋಣಿ ಭಾರತದ ಬದಿಯ ನೀರಿನಲ್ಲಿ ಹೋಗುತ್ತಿತ್ತು. ಅದರಲ್ಲಿ ಮಾದಕ ವಸ್ತು ಇತ್ತು. ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಪದೇಪದೇ ಮಾದಕ ವಸ್ತುಗಳ ಕಳ್ಳಸಾಗಣೆಗೆ ಪಾಕಿಸ್ತಾನ ಪ್ರಯತ್ನ ಮಾಡುತ್ತಲೇ ಇದೆ. ಕಳೆದ ತಿಂಗಳು ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಿಂದ ಆ್ಯಂಟಿ ಟೆರರಿಸ್ಟ್ ಪಡೆ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ನ್ನು ವಶಪಡಿಸಿಕೊಂಡಿತ್ತು. ಪಾಕಿಸ್ತಾನದ ಡ್ರಗ್ ಡೀಲರ್ಗಳು ಅರೇಬಿಯನ್ ಸಮುದ್ರದ ಮೂಲಕ, ತಮ್ಮ ಭಾರತೀಯ ಸಹವರ್ತಿಗಳಿಗೆ ಕಳಿಸುತ್ತಿದ್ದಾರೆ ಎಂದು ಎಟಿಎಸ್ ತಿಳಿಸಿದೆ.
ಹಾಗೇ, ಸೆಪ್ಟೆಂಬರ್ನಲ್ಲಿ ಗುಜರಾತ್ನ ಕಚ್ನ ಮುಂದ್ರಾ ಬಂದರಿನಲ್ಲಿ 3 ಸಾವಿರ ಕೆಜೆಗಳಷ್ಟು ಮಾದಕ ವಸ್ತುಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಪಡಿಸಿಕೊಂಡಿತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ 21 ಸಾವಿರ ಕೋಟಿ ರೂಪಾಯಿಗಳಷ್ಟದ್ದು ಬೆಲೆ ಬಾಳುತ್ತದೆ. ಈ ಡ್ರಗ್ಸ್ನ್ನು ಅಫ್ಘಾನಿಸ್ತಾನದಿಂದ ತರಲಾಗಿದೆ ಎಂದು ಹೇಳಲಾಗಿದ್ದು, ಪ್ರಕರಣವನ್ನು ಎನ್ಐಎಗೆ ವಹಿಸಲಾಗಿದೆ. ಅಂದು ಅಫ್ಘಾನ್ ದೇಶದ ಕೆಲವರನ್ನೂ ಬಂಧಿಸಲಾಗಿದೆ. ಅದಕ್ಕೂ ಮೊದಲು ಏಪ್ರಿಲ್ನಲ್ಲಿ ಗುಜರಾತ್ ಕರಾವಳಿ ತೀರದಲ್ಲಿ ಆ್ಯಂಟಿ ಟೆರರಿಸ್ಟ್ ದಳ ಮತ್ತು ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆ ನಡೆಸಿ, 150 ಕೋಟಿ ರೂಪಾಯಿ ಮೌಲ್ಯದ 30 ಕೆಜಿಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದವು.
ಇದನ್ನೂ ಓದಿ: Health Tips: ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ: ಇಲ್ಲಿದೆ ಮಾಹಿತಿ
Published On - 9:52 am, Tue, 21 December 21




