ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಹೊಸ ಅಭಿಯಾನ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ಗಳಲ್ಲೂ ಕಸ ಸಂಗ್ರಹಣೆಗೆ ಕಸದ ವಾಹನ ಬರುತ್ತವೆ. ಮನೆ ಮುಂದೆ ಕಸ ಸಂಗ್ರಹದ ವಾಹನ ಬಂದರೂ ಜನರು ಅದರಲ್ಲಿ ಕಸ ಹಾಕದೇ ಬಡಾವಣೆಗಳ ಒಂದು ಮೂಲೆಯಲ್ಲಿ ಕಸ ಚೆಲ್ಲುವ ಕೆಟ್ಟ ಪ್ರವೃತ್ತಿಯನ್ನು ಮಾತ್ರ ಬಿಟ್ಟಿಲ್ಲ.
ಧಾರವಾಡ: ನಗರಗಳಲ್ಲಿ ಬೆಳಿಗ್ಗೆ ಏಳುತ್ತಲೇ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಗಾಗಿ ಹರಸಾಹಸ ಮಾಡುತ್ತಲೇ ಇರುತ್ತವೆ. ಇದೆಲ್ಲದರ ಮಧ್ಯೆ ಮನೆ ಮನೆಗೆ ಕಸ ಸಂಗ್ರಹಿಸುವ ಗಾಡಿಗಳನ್ನು ಕಳಿಸಿದರೂ ಜನರು ಅನೇಕ ವರ್ಷಗಳಿಂದ ಎಸೆಯುತ್ತಾ ಬಂದಿರುವ ಸ್ಥಳದಲ್ಲಿಯೇ ಕಸ ಹಾಕುವುದನ್ನು ಬಿಡೋದಿಲ್ಲ. ಇದರಿಂದಾಗಿ ನಗರಗಳೆಲ್ಲ ಕಸದಿಂದ ತುಂಬಿ ಹೋಗುತ್ತವೆ. ಹೀಗೆ ಕಂಡ ಕಂಡಲ್ಲಿ ಕಸ ಹಾಕುವುದನ್ನು ತಪ್ಪಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ.
ಕಸವನ್ನು ತೆಗೆದು ಬೇಲಿ ಹಾಕುವ ಹೊಸ ತಂತ್ರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ಗಳಲ್ಲೂ ಕಸ ಸಂಗ್ರಹಣೆಗೆ ಕಸದ ವಾಹನ ಬರುತ್ತವೆ. ಮನೆ ಮುಂದೆ ಕಸ ಸಂಗ್ರಹದ ವಾಹನ ಬಂದರೂ ಜನರು ಅದರಲ್ಲಿ ಕಸ ಹಾಕದೇ ಬಡಾವಣೆಗಳ ಒಂದು ಮೂಲೆಯಲ್ಲಿ ಕಸ ಚೆಲ್ಲುವ ಕೆಟ್ಟ ಪ್ರವೃತ್ತಿಯನ್ನು ಮಾತ್ರ ಬಿಟ್ಟಿಲ್ಲ. ಈ ಕಾರಣದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ 3ರಲ್ಲಿ ವಿನೂತನ ಪ್ರಯತ್ನವೊಂದನ್ನು ಶುರು ಮಾಡಲಾಗಿದೆ. ಬಡಾವಣೆಗಳ ಮೂಲೆಯಲ್ಲಿ ಕಸ ಚೆಲ್ಲುವ ಅಥವಾ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲುವ ಸ್ಥಳಗಳನ್ನು ಗುರುತಿಸಿರುವ ಪಾಲಿಕೆ ಸಿಬ್ಬಂದಿ, ಅಲ್ಲಿ ಹೋಗಿ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಜಾಗದ ಸುತ್ತಲೂ ಕಟ್ಟಿಗೆ ಮತ್ತು ಮುಳ್ಳು ಕಂಟಿಗಳಿಂದ ಸುತ್ತುವರೆದು ಬೇಲಿ ಹಾಕುತ್ತಿದ್ದಾರೆ. ದಯಮಾಡಿ ಇಲ್ಲಿ ಯಾರೂ ಕಸ ಚೆಲ್ಲಬಾರದು, ಒಂದು ಹೆಜ್ಜೆ ಸ್ವಚ್ಛತೆ ಕಡೆ ಇಡಿ ಎಂಬ ಫಲಕ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಕಸದ ವಾಹನ ಬರದೇ ಇದ್ದರೆ ಚಾಲಕನಿಗೆ ದೂರವಾಣಿ ಕರೆ ಮಾಡಬಹುದು. ಅಲ್ಲದೇ, ಚಾಲಕನೂ ಸಂಪರ್ಕಕ್ಕೆ ಸಿಗದಿದ್ದಾಗ ಸಂಬಂಧಿಸಿದ ಮೇಲ್ವಿಚಾರಕರ ದೂರವಾಣಿಗೆ ಸಂಪರ್ಕಿಸಲು ಫಲಕದಲ್ಲಿ ನಂಬರ್ ಬರೆಯಲಾಗಿದೆ.
ಕಸವನ್ನೂ ತೆಗೆಯುತ್ತಾರೆ, ರಂಗೋಲಿಯನ್ನೂ ಹಾಕುತ್ತಾರೆ ಕಳೆದೊಂದು ವಾರದಿಂದ ಪಾಲಿಕೆ ಸಿಬ್ಬಂದಿ ಈ ಪ್ರಯೋಗವನ್ನು ಮಾಡುತ್ತಿದ್ದಾರೆ. ನಗರದ ಅನೇಕ ಕಡೆಗಳಲ್ಲಿ ಎಷ್ಟೋ ವರ್ಷಗಳಿಂದ ಕಸವನ್ನು ಕಂಡ ಕಂಡಲ್ಲಿ ಹಾಕುವ ರೂಢಿ ಮಾಡಿಕೊಂಡಿದ್ದಾರೆ. ಅದು ದೇವಸ್ಥಾನಗಳ ಎದುರು ಇರಬಹುದು, ಆಸ್ಪತ್ರೆಗಳ ಪಕ್ಕ ಇರಬಹುದು ಇಲ್ಲವೇ ಶಾಲಾ-ಕಾಲೇಜುಗಳ ಸಮೀಪ ಇರಬಹುದು. ಜನರ ಈ ವರ್ತನೆಯಿಂದಾಗಿ ಸುತ್ತಮುತ್ತಲಿನ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗೆ ಕಸ ಚೆಲ್ಲಿದರೆ ದಂಡ ಹಾಕುವುದಾಗಿ ಹೇಳಿದರೂ ಜನರು ಕಸ ಹಾಕೋದನ್ನು ಬಿಡಲಿಲ್ಲ. ಹೀಗಾಗಿ ಅಧಿಕಾರಿಗಳು ವಿಭಿನ್ನ ಬಗೆಯ ಅಭಿಯಾನವನ್ನು ಶುರು ಮಾಡುವ ಪರಿಸ್ಥಿತಿ ಇದೆ. ಕಸವನ್ನು ತೆಗೆದು, ಅಲ್ಲಿ ಬೊಂಬುಗಳಿಂದ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಬಳಿಕ ರಂಗೋಲಿಯನ್ನು ಚಿತ್ರಿಸಿ, ಅಲ್ಲಿ ಹೂವಿನ ಕುಂಡಗಳನ್ನು ಇಡಲಾಗುತ್ತಿದೆ. ಇದನ್ನು ನೋಡಿದ ಯಾರಿಗೂ ಕಸ ಚೆಲ್ಲುವ ಮನಸ್ಸು ಬರುವುದಿಲ್ಲ. ಸದ್ಯ ಜನರು ಇದೀಗ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಪಾಲಿಕೆಯ ಈ ನೂತನ ಕ್ರಮದಿಂದಾಗಿ ಸ್ಥಳೀಯರು ಖುಷಿಯಾಗಿದ್ದಾರೆ. ಅಲ್ಲದೇ ಎಲ್ಲರು ಕೂಡ ಈ ಅಭಿಯಾನಕ್ಕೆ ಕೈಜೋಡಿಸಬೇಕು ಅಂತಿದ್ದಾರೆ.
ಐದು ಸಾವಿರ ರೂಪಾಯಿ ದಂಡವನ್ನೂ ಹಾಕಬಹುದು ಇನ್ನು ಇದನ್ನು ಮೀರಿ ಕಸ ಹಾಇದರೆ ಸಿಸಿ ಟಿವಿ ಹಾಗೂ ಸಾರ್ವಜನಿಕರ ಮಾಹಿತಿ ಆಧರಿಸಿ 5 ಸಾವಿರ ರೂಪಾಯಿ ದಂಡ ಹಾಕಲು ಸಹ ಪಾಲಿಕೆಗೆ ಅವಕಾಶವಿದೆ. ಸಾರ್ವಜನಿಕರು ಕಸ ಚೆಲ್ಲುವವರ ಫೋಟೋ ಅಥವಾ ವಿಡಿಯೋ ಕಳಿಸಿದರೆ ಅದನ್ನು ಆಧರಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯಕ್ಕೆ ಅವಳಿ ನಗರಕ್ಕೆ ಸ್ವಚ್ಛತೆಗೆ ಥ್ರೀ ಸ್ಟಾರ್ ಗೌರವ ಸಿಕ್ಕಿದೆ. ಇದೀಗ ಸ್ವಚ್ಛತೆಗೆ ಮತ್ತಷ್ಟು ಗಮನ ಕೊಟ್ಟು, ಮಹಾನಗರವು ಮತ್ತಷ್ಟು ಸ್ವಚ್ಛವಾದರೆ ಫೈವ್ ಸ್ಟಾರ್ ಗೌರವ ಸಿಗಲಿದೆ.
ಈ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ; ಆರ್ ಎಂ ಕುಲಕರ್ಣಿ ಅಭಿಯಾನದ ಬಗ್ಗೆ ಟಿವಿ9 ಡಿಜಿಟಲ್ ಜತೆಗೆ ಮಾತನಾಡಿದ ಪಾಲಿಕೆ ಸಹಾಯಕ ಆಯುಕ್ತ ಆರ್ ಎಂ ಕುಲಕರ್ಣಿ, ಈ ಅಭಿಯಾನಕ್ಕೆ ಸಾಕಷ್ಟು ಉತ್ತಮ ಸ್ಪಂದನೆ ಸಿಗುತ್ತಿದೆ. ಎಷ್ಟೇ ಹೇಳಿದರೂ ನಗರದ ಅನೇಕ ಕಡೆಗಳಲ್ಲಿ ಕಸವನ್ನು ಹಾಕುವುದು ಬಿಟ್ಟಿರಲಿಲ್ಲ. ಇದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿ ಈ ಹೊಸ ಅಭಿಯಾನವನ್ನು ಆರಂಭಿಸಿದ್ದೇವೆ. ಇದೀಗ ಅನೇಕ ಪ್ರದೇಶಗಳಲ್ಲಿ ಜನರು ಕಸ ಹಾಕುವುದನ್ನು ಬಿಟ್ಟಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ರಂಗೋಲಿ ಹಾಕಿ, ಹೂವಿನ ಕುಂಡಗಳನ್ನು ಇಡುವುದರಿಂದ ಜನರಿಗೆ ಕಸ ಹಾಕಲು ಮನಸ್ಸು ಬರುವುದಿಲ್ಲ. ಸದ್ಯಕ್ಕೆ ಈ ಅಭಿಯಾನ ಯಶಸ್ವಿಯಾಗಿದೆ. ಜನರು ಕೂಡ ಮುಂದಿನ ದಿನಗಳಲ್ಲಿ ತಮ್ಮ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಮನೆ ಮನೆಗೆ ಬರುವ ಕಸ ಸಂಗ್ರಹಿಸುವ ವಾಹನಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಅಂದಾಗ ಸಹಜವಾಗಿ ಹೀಗೆ ಎಲ್ಲೆಂದರಲ್ಲೆ ಕಸ ಹಾಕುವುದು ತಪ್ಪುತ್ತದೆ ಅಂತಾ ಹೇಳಿದ್ದಾರೆ.
ಸಾರ್ವಜನಿಕರ ಪಾತ್ರ ಬಲು ಮುಖ್ಯ; ವಿನಾಯಕ ಜೋಶಿ ಇನ್ನು ಈ ವೇಳೆ ಮಾತನಾಡಿದ ಮಾಳಮಡ್ಡಿ ಬಡಾವಣೆಯ ನಿವಾಸಿಯಾಗಿರುವ ವಿನಾಯಕ ಜೋಶಿ, ಎಲ್ಲವನ್ನೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಮಾಡಬೇಕು ಅನ್ನುವುದು ತಪ್ಪು. ಅವರು ತಮ್ಮ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಬಂದಾಗ ಎಲ್ಲರೂ ತಪ್ಪದೇ ಕಸವನ್ನು ಅದರಲ್ಲಿ ಹಾಕಬೇಕು. ಒಂದು ವೇಳೆ ಹಾಕಲು ಸಾಧ್ಯವಾಗದೇ ಇದ್ದಾಗ ಮರುದಿನವಾದರೂ ಹಾಕಬೇಕು. ಆದರೆ ಅದೆಲ್ಲ ಬಿಟ್ಟು ಎಲ್ಲೆಂದರಲ್ಲೆ ಕಸ ಚೆಲ್ಲುವುದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ದ್ರೋಹ. ನಗರವನ್ನು ಸ್ವಚ್ಛವಾಗಿಡುವಲ್ಲಿ ಸಾರ್ವಜನಿಕರ ಪಾತ್ರ ದೊಡ್ಡದು. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿತು ಬದುಕಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ
Rafael Nadal: ಟೆನಿಸ್ ತಾರೆ ರಾಫೆಲ್ ನಡಾಲ್ಗೆ ಕೊರೊನಾ ಸೋಂಕು ದೃಢ!
ಅಮ್ಮನ ಗರ್ಭ, ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸೇಫ್; ಸಾಯುವ ಮುನ್ನ ಪತ್ರ ಬರೆದಿಟ್ಟ ಬಾಲಕಿ