ಶಂಕರ್ ಮಹದೇವನ್ ಹಾಡಿದ ದೇಶಭಕ್ತಿ ಗೀತೆಗಳ ಆಲ್ಬಂ ‘ಸಂಘ್ ಗೀತ್’ ಲೋಕಾರ್ಪಣೆ

Sangh Geet album launched by RSS chief Mohan Bhagwat: ಆರೆಸ್ಸೆಸ್​ನ ಜನಪ್ರಿಯ 25 ದೇಶಭಕ್ತಿ ಗೀತೆಗಳ ಸಂಗ್ರಹವಾದ ‘ಸಂಘ್ ಗೀತ್’ ಆಲ್ಬಂ ಅನ್ನು ಲೋಕಾರ್ಪಣೆ ಮಾಡಲಾಯಿತು. ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ‘ಸಂಘ್ ಗೀತ್’ ಆಲ್ಬಂ ಅನಾವರಣಗೊಳಿಸಿದರು. ಖ್ಯಾತ ಗಾಯಕ ಶಂಕತ್ ಮಹದೇವನ್ ಈ ಎಲ್ಲಾ 25 ಹಾಡುಗಳನ್ನೂ ಹಾಡಿದ್ದಾರೆ.

ಶಂಕರ್ ಮಹದೇವನ್ ಹಾಡಿದ ದೇಶಭಕ್ತಿ ಗೀತೆಗಳ ಆಲ್ಬಂ ‘ಸಂಘ್ ಗೀತ್’ ಲೋಕಾರ್ಪಣೆ
‘ಸಂಘ್ ಗೀತ್’ ಆಲ್ಬಂ ಅನಾವರಣ

Updated on: Sep 28, 2025 | 11:13 PM

ನಾಗಪುರ್, ಸೆಪ್ಟೆಂಬರ್ 28: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ‘ಸಂಘ್ ಗೀತ್’ ಆಲ್ಬಂ (Sangh Geet album) ಅನ್ನು ಅನಾವರಣಗೊಳಿಸಿದ್ದಾರೆ. ಈ ಆಲ್ಬಂನಲ್ಲಿ ಆರೆಸ್ಸೆಸ್​ನ ಹಲವು ದೇಶಭಕ್ತಿ ಗೀತೆಗಳ ಸಂಗ್ರಹ ಇದೆ. ಈ ಆಲ್ಬಂ ಉದ್ಘಾಟನಾ ಸಮಾರಂಭ ನಾಗಪುರ್​ನಲ್ಲಿ ನಡೆದಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮೊದಲಾದವರು ಪಾಲ್ಗೊಂಡಿದ್ದರು.

ಸಂಘ್ ಗೀತ್ ಆಲ್ಬಂನಲ್ಲಿ 25 ಹಾಡುಗಳಿವೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಅವರು ಈ ಹಾಡುಗಳನ್ನು ಹಾಡಿದ್ದಾರೆ. ಈ ಆಲ್ಬಂ ಬಿಡುಗಡೆ ಕಾರ್ಯಕ್ರಮದಲ್ಲೂ ಶಂಕರ್ ಮಹಾದೇವನ್ ಪಾಲ್ಗೊಂಡು ಲೈವ್ ಆಗಿ ಹತ್ತು ಹಾಡುಗಳನ್ನು ಹಾಡಿದ್ದು ವಿಶೇಷ.

ಇದನ್ನೂ ಓದಿ: ನೂತನ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

‘ದೇಶದ ಮೇಲಿನ ಭಕ್ತಿಯಿಂದ ಸಂಘ್ ಗೀತ್ ಹುಟ್ಟಿಕೊಂಡಿದ್ದು. ಸ್ವಯಂಸೇವಕ ಬದುಕಿನ ಅನುಭವದಿಂದ ಈ ಹಾಡುಗಳು ಹುಟ್ಟಿವೆ. ದೇಶಭಕ್ತಿಯ ಪ್ರತೀಕವಾಗಿವೆ ಈ ಹಾಡುಗಳು’ ಎಂದು ಮೋಹನ್ ಭಾಗವತ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿಯೊಂದು ಭಾರತೀಯ ಭಾಷೆಯಲ್ಲೂ ಹಾಡುಗಳನ್ನು ಹೊಂದಿದೆ. ಅದರ ಒಟ್ಟು ಹಾಡುಗಳ ಸಂಖ್ಯೆ 25,000 ದಿಂದ 30,000 ದಷ್ಟು ಇರಬಹುದು. ಈ ಹಾಡುಗಳನ್ನು ರಚಿಸಿದ್ದು ಯಾರು ಎಂದು ಪತ್ತೆ ಮಾಡುವುದು ಕಷ್ಟ ಎಂದು ಸರಸಂಘಚಾಲಕರು ಹೇಳಿದ್ದಾರೆ.

ಸಂಘ್ ಗೀತ್​ನ ಹಾಡುಗಳನ್ನು ಹಾಡುವುದು ಅಷ್ಟು ಸುಲಭದ ಕೆಲಸವಲ್ಲ. ಮಹಾದೇವನ್ ಅವರು ನಿಷ್ಠಾವಂತ ಸ್ವಯಂಸೇವಕರಂತೆ ಹಾಡಿದ್ದಾರೆ ಎಂದು ಮೋಹನ್ ಭಾಗವತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಶ್ವಸಂಸ್ಥೆ ರಾಯಭಾರಿ, ಪಿಎಂಒ ನಂಟು… ಸ್ವಾಮಿ ಚೈತನ್ಯಾನಂದರ ನಾನಾ ವೇಷಗಳನ್ನು ಕಂಡ ಪೊಲೀಸರು

ಇದೇ ವೇಳೆ, ಭಾಗವತ್ ಅವರು ಆರೆಸ್ಸೆಸ್​ನ ವಿಶೇಷ ಕಾರ್ಯಶೈಲಿ ಬಗ್ಗೆ ವಿವರ ನೀಡಿದ್ದಾರೆ. ‘ಆರೆಸ್ಸೆಸ್​ನ ಕಾರ್ಯಶೈಲಿಯಲ್ಲಿ ಒಂದು ಪರಿಮಿತಿ ಇರುತ್ತದೆ. ಅದನ್ನು ದಾಟಿ ಹೋಗುವಂತಿಲ್ಲ. ಆರೆಸ್ಸೆಸ್​ನ ವಿಧಾನವು ಅನನ್ಯವಾಗಿದ್ದು, ಸರಿಸಾಟಿ ಇಲ್ಲದಂಥದ್ದು. ಈ ರೀತಿಯ ಮಾನವ ಅಭಿವೃದ್ಧಿ ಮಾದರಿ ವಿಶ್ವದಲ್ಲಿ ಸದ್ಯ ಬೇರೆಲ್ಲೂ ಇಲ್ಲ’ ಎಂದು ಅವರು ಗರ್ವ ವ್ಯಕ್ತಪಡಿಸಿದ್ದಾರೆ.

ಸಂಘ್ ಗೀತ್ ಆಲ್ಬಂ ಉದ್ಘಾಟನಾ ಕಾರ್ಯಕ್ರಮದ ವಿಡಿಯೋ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಸಂಘ್ ಗೀತ್ ಅನ್ನು ಐತಿಹಾಸಿಕ ಕಾರ್ಯಕ್ರಮವೆಂದು ಬಣ್ಣಿಸಿದರು. ಇದರಲ್ಲಿರುವ ಹಾಡುಗಳು ದೇಶಭಕ್ತಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 pm, Sun, 28 September 25