ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ನಂತರ ಶರದ್ ಪವಾರ್ ಆಯ್ಕೆ ಸಾಧ್ಯತೆ
ಯುಪಿಎ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸೋನಿಯಾ ಗಾಂಧಿ ಆಸಕ್ತಿ ತೋರಿಸುತ್ತಿಲ್ಲ. ಈ ಸ್ಥಾನಕ್ಕೆ ಯಾರು ಸೂಕ್ತ ಎಂಬ ಹುಡುಕಾಟಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ.
ಮುಂಬೈ: ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ನಿವೃತ್ತಿಯ ನಂತರ ಆ ಸ್ಥಾನವನ್ನು ಮಹಾರಾಷ್ಟ್ರದ ಹಿರಿಯ ರಾಜಕಾರಿಣಿ ಶರದ್ ಪವಾರ್ ಅಲಂಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಯುಪಿಎ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸೋನಿಯಾ ಗಾಂಧಿ ಆಸಕ್ತಿ ತೋರಿಸುತ್ತಿಲ್ಲ. ಈ ಸ್ಥಾನಕ್ಕೆ ಯಾರು ಸೂಕ್ತ ಎಂಬ ಹುಡುಕಾಟಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಹಲವು ಪ್ರಭಾವಿ ನಾಯಕರು ಶರದ್ ಪವಾರ್ ಪರ ಇದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ರಾಷ್ಟ್ರೀಯ ಸುದ್ದಿ ಜಾಲತಾಣಗಳು ವರದಿ ಮಾಡಿವೆ.
ಕಾಂಗ್ರೆಸ್ ಪಕ್ಷವು ಮುಂದಿನ ವರ್ಷದ ಆರಂಭದಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬಹುದು. ರಾಹುಲ್ ಗಾಂಧಿ ಈ ಸ್ಥಾನದತ್ತ ಒಲವು ತೋರಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರ ಆಯ್ಕೆಯ ಬಗ್ಗೆ ಮಾತುಗಳು ಕೇಳಿಬಂದಿವೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಾಹೀನ ಸಾಧನೆಯ ಜವಾಬ್ದಾರಿ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈ ಸಂದರ್ಭದಲ್ಲಿ ಪಕ್ಷವನ್ನು ಕಾಪಾಡಲು ಸೋನಿಯಾ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರಾಗಿ ನೊಗ ಹೊತ್ತರು.
ಅದಕ್ಕೂ ಮೊದಲು ಅವರು ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಾಗಲೂ ಯುಪಿಎ ಅಧ್ಯಕ್ಷೆಯಾಗಿ ಮತ್ತು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕಿಯಾಗಿ ಮುಂದುವರಿದಿದ್ದರು. ಆದರೆ ಈ ಬಾರಿ ಮಾತ್ರ ಸಕ್ರಿಯ ರಾಜಕಾರಣದಿಂದ ಅವರು ಸಂಪೂರ್ಣವಾಗಿ ನಿವೃತ್ತರಾಗುವ ಸಾಧ್ಯತೆಯಿದೆ.
ಸೋನಿಯಾ ಸ್ಥಾನ ಅಲಂಕರಿಸುವ ನಾಯಕನಿಗೆ ಸಂಧಾನ ಚಾತುರ್ಯ, ಹೊಸ ತಲೆಮಾರಿನವರೊಂದಿಗೆ ವ್ಯವಹರಿಸುವ ವ್ಯವಧಾನ, ಇತರ ಪಕ್ಷಗಳೊಂದಿಗೆ ಸಂಧಾನ ನಡೆಸುವ ಚಾಣಾಕ್ಷತೆ, ಪ್ರಧಾನಿ ನರೇಂದ್ರ ಮೋದಿಯ ತಂತ್ರಗಳನ್ನು ಎದುರಿಸಬಲ್ಲಷ್ಟು ಪ್ರಭಾವ ಇರಬೇಕೆಂದು ಕಾಂಗ್ರೆಸ್ ಪಕ್ಷವು ನಿರೀಕ್ಷಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಮರಾಠ ನಾಯಕ ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನ ಗೆದ್ದರೂ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಶರದ್ ಪವಾರ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಎನ್ಸಿಪಿ-ಕಾಂಗ್ರೆಸ್-ಶಿವಸೇನೆಯ ಮೈತ್ರಿ ಜನ್ಮತಳೆಯಲು ಕಾರಣರಾಗಿ, ರಾಜಕೀಯವಾಗಿ ತಾವಿನ್ನೂ ಪ್ರಸ್ತುತ ಎಂಬುದನ್ನು ಸಾಬೀತುಪಡಿಸಿದ್ದರು.
ಸೋನಿಯಾ ಸ್ಥಾನಕ್ಕೆ ಪವಾರ್ ಬರಬೇಕೆಂದರೆ ಅವರು ಕಟ್ಟಿ ಬೆಳೆಸಿದ ಎನ್ಸಿಪಿಯನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸಬೇಕಾಗುತ್ತದೆ. ಸೋನಿಯಾರ ವಿದೇಶಿ ಹಿನ್ನೆಲೆಯನ್ನೇ ದೊಡ್ಡದು ಮಾಡಿ, ಕಾಂಗ್ರೆಸ್ನಿಂದ ಸಿಡಿದು ಪ್ರತ್ಯೇಕ ಪಕ್ಷ ಕಟ್ಟಿದ್ದ ಶರದ್ ಪವಾರ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿ, ಅದೇ ಪಕ್ಷದ ನೇತೃತ್ವ ವಹಿಸುವಂತಾದರೆ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಆವರ್ತವೇ ಪೂರ್ಣಗೊಂಡಂತೆ ಆಗುತ್ತದೆ.
ಎನ್ಸಿಪಿ ಸ್ಪಷ್ಟನೆ ಯುಪಿಎ ಅಧ್ಯಕ್ಷರಾಗಿ ಶರದ್ ಪವಾರ್ ಆಯ್ಕೆಗೆ ಸಂಬಂಧಿಸಿದಂತೆ ಯುಪಿಎ ಮಿತ್ರಪಕ್ಷಗಳೊಂದಿಗೆ ಎನ್ಸಿಪಿ ಚರ್ಚೆ ನಡೆಸಿಲ್ಲ ಎಂದು ಎನ್ಸಿಪಿ ವಕ್ತಾರ ಮಹೇಶ್ ತಪಸೆ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ನಾಯಕತ್ವದ ಬಗ್ಗೆ ಶರದ್ ಪವಾರ್ ಆಕ್ಷೇಪ: ಟೀಕೆ ಬೇಡ ಎಂದ ಯಶೋಮತಿ ಠಾಕುರ್