ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ(ಶಿವಸೇನೆ), ಎನ್ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಬೇಕು ಎಂದು ಎನ್ಸಿಪಿ ಮುಖ್ಯ ಶರದ್ ಪವಾರ್ ಹೇಳಿದ್ದಾರೆ. ಸೈದ್ಧಾಂತಿಕ ವೈರುಧ್ಯ ಹೊಂದಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ ಜತೆಗೆ ಶಿವಸೇನೆ ಕೈಜೋಡಿಸಬಾರದು ಎನ್ನುವ ವಿಚಾರದೊಂದಿಗೆ ಶಿವಸೇನೆಯ ಏಕನಾಥ್ ಶಿಂದೆ ಬಣ ಸರ್ಕಾರವನ್ನು ಕೆಡವಿ ಬಿಜೆಪಿಯೊಂದಿಗೆ ಕೈಜೋಡಿಸಿತ್ತು.
ಇದಾದ ಬಳಿಕ ಉದ್ಧವ್ ಠಾಕ್ರೆ ಬಣದ ಭವಿಷ್ಯದ ರಾಜಕೀಯ ನಿರ್ಧಾರ ಹೇಗಿರುತ್ತದೆ ಎನ್ನುವ ಕುತೂಹಲ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಹಳೆಯ ಮೈತ್ರಿ ಮಹಾ ವಿಕಾಸ್ ಅಘಾಡಿಯ ರೂವಾರಿಯಾಗಿದ್ದ ಶರದ್ ಪವಾರ್ ಮೈತ್ರಿಯನ್ನು ಮುಂದುವರೆಸುವ ಮಾತನಾಡಿದ್ದು ಎಲ್ಲಾ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಶರದ್ ಪವಾರ್ ಮುಂಬರು ವಿಧಾನಸಭೆ ಚುನಾವಣೆಯನ್ನು ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಎದುರಿಸಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಈ ವಿಚಾರವನ್ನು ನನ್ನ ಪಕ್ಷದ ಮುಖಂಡರೊಂದಿಗೆ ಮೊದಲು ಚರ್ಚಿಸುತ್ತೇನೆ ಬಳಿಕ ಮೈತ್ರಿಕೂಟದ ಇತರೆ ನಾಯಕರೊಂದಿಗೂ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಪವಾರ್ ಅವರ ಈ ಹೇಳಿಕೆ ಕುರಿತು ಕಾಂಗ್ರೆಸ್ ಅಥವಾ ಶಿವಸೇನೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಎನ್ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿದ್ದರು. ಬಿಜೆಪಿ ಶಿವಸೇನೆ ಜತೆಯಾಗಿ ಚುನಾವಣೆಗೆ ಹೋಗಿದ್ದವು. ಮಹಾವಿಕಾಸ್ ಅಘಾಡಿಯ ಚುನಾವಣಾ ಬಳಿಕದ ಮೈತ್ರಿಯಾಗಿದೆ.
ಶಿಂದೆ ಬಣದ ಶಾಸಕರಿಗೆ ಸ್ಪಷ್ಟತೆ ಇಲ್ಲ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆಯ ಶಿವಸೇನಾ ಬಣಕ್ಕೆ ಯಾವುದೇ ಸ್ಪಷ್ಟತೆಯಿಲ್ಲ ಎಂದು ಕಿಡಿಕಾರಿರುವ ಶರದ್ ಪವಾರ್, ಶಾಸಕರು ಕ್ಷಣಕ್ಕೊಂದು ಸಬೂಬು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಮ್ಮೆ ಹಿಂದುತ್ವದ ಕಾರಣವನ್ನು ನೀಡಿದರೆ, ಇನ್ನೊಮ್ಮೆ ಕ್ಷೇತ್ರದ ಅನುದಾನದ ಮಾತು ಹೇಳುತ್ತಿದ್ದಾರೆ, ಹೀಗಾಗಿ ನಮ್ಮ ಮೈತ್ರಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರವನ್ನು ರಚನೆ ಮಾಡಿರುವುದರ ಹಿಂದೆ ಯಾವುದೇ ಸ್ಪಷ್ಟ ಕಾರಣ ಇಲ್ಲ ಎಂದು ಹೇಳಿದ್ದಾರೆ.
ಔರಂಗಾಬಾದ್ ಹೆಸರು ಬದಲಾವಣೆಗೆ ವಿರೋಧ
ಔರಂಗಾಬಾದ್ ಹೆಸರು ಬದಲಾವಣೆಯು ನಮ್ಮ ಕಾಮನ್ ಮಿನಿಮಮ್ ಪ್ರೋಗ್ರಾಂನಲ್ಲಿ ಇರಲಿಲ್ಲ, ಯಾವುದೇ ಪೂರ್ವಾಪರ ಚರ್ಚೆ ಇಲ್ಲದೆ ಹೆಸರು ಬದಲಾವಣೆಯ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಮಾಡಲಾಗಿದೆ. ಈ ನಿರ್ಧಾರವಾಗುವವರೆಗೆ ನನಗೆ ವಿಚಾರವೇ ಗೊತ್ತಿರಲಿಲ್ಲ.
ಸಚಿವ ಸಂಪುಟ ಸಭೆಯಲ್ಲಿ ನಮ್ಮ ಪಕ್ಷದ ಸಚಿವರು ತಮ್ಮ ಆಕ್ಷೇಪವನ್ನು ತಿಳಿಸಿದ್ದಾರೆ. ಇದು ಹಿಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ನಿರ್ಧಾರವಾಗಿತ್ತೇ ಹೊರತು ಮೈತ್ರಿಕೂಟದ್ದಲ್ಲ. ಹೆಸರು ಬದಲಾವಣೆ ಬದಲಿಗೆ ಔರಂಗಾಬಾದ್ ಅಭಿವೃದ್ಧಿಗೆ ನಿರ್ಧಾರ ಮಾಡಿದ್ದರೆ ನಾವೆಲ್ಲಾ ಖುಷಿ ಪಡುತ್ತಿದ್ದೆವು ಎಂದು ಪವಾರ್ ಹೇಳಿದ್ದಾರೆ. 2024ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ.