ದೆಹಲಿ: ಶಶಿ ತರೂರ್ (Shashi Tharoor) ತಮ್ಮ ತವರು ರಾಜ್ಯವಾದ ಕೇರಳಕ್ಕೆ(Kerala) ಕೈಗೊಂಡಿರುವ ಪ್ರವಾಸ ಬಗ್ಗೆ ಕಾಂಗ್ರೆಸ್ನಲ್ಲೇ (Congress) ಟೀಕೆಗಳು ಕೇಳಿಬಂದಿವೆ. ಕೇರಳದ ನಾಯಕರು ಸಂಸದರ ಕಾರ್ಯಕ್ರಮಗಳು ಮತ್ತು ಸಭೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಶಶಿ ತರೂರ್ ಅವರ ಉತ್ತರ ಕೇರಳದ ಘಟನೆಗಳನ್ನು “ರಾಜಕೀಯ ಪ್ರವಾಸ” ಎಂದು ಬಿಂಬಿಸಲಾಗುತ್ತಿದ್ದು, ಹೊಸ “ತರೂರ್ ಬಣ”ದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಕೇರಳದ ಕಾಂಗ್ರೆಸ್ ರಾಜ್ಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳ ಪ್ರವಾಸದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವುಂಟಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, ನಾನು ಯಾರಿಗೂ ಹೆದರುವುದಿಲ್ಲ, ನನ್ನ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಕೇರಳದಲ್ಲಿ ಕಾಂಗ್ರೆಸ್‌ನ ಒಂದು ವಿಭಾಗ ತರೂರ್ ವಿರುದ್ಧ ಕೋಪಗೊಂಡಿದ್ದು, ಕೋಝಿಕ್ಕೋಡ್‌ನಲ್ಲಿ ತರೂರ್ ಭಾಗವಹಿಸಲಿದ್ದ ಯುವ ಕಾಂಗ್ರೆಸ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಕೋಝಿಕ್ಕೋಡ್ ಕಾಂಗ್ರೆಸ್ ಸಂಸದ ರಾಘವನ್ ಮತ್ತು ಇತರ ಯುವ ಕಾಂಗ್ರೆಸ್ ನಾಯಕರ ಮಧ್ಯಪ್ರವೇಶದ ನಂತರ ಅಂತಿಮವಾಗಿ ಕಾಂಗ್ರೆಸ್ ಪರ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತು.
ಯುವ ಕಾಂಗ್ರೆಸ್ ಭಾನುವಾರ ಆಯೋಜಿಸಿದ್ದ “ಸಂಘ ಪರಿವಾರ ಮತ್ತು ಜಾತ್ಯತೀತತೆಗೆ ಸವಾಲುಗಳು” ಎಂಬ ವಿಚಾರ ಸಂಕಿರಣದ ಮೇಲೆ “ಅಘೋಷಿತ ನಿಷೇಧ” ಹೇರಿದ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್‌ನಲ್ಲಿ “ತರೂರ್ ಬಣ” ಎಂದು ಕರೆಯಲ್ಪಡುವ ತರೂರ್ ಬೆಂಬಲಿಗರು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ
ಈಗ, ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕಾಗಿ ಯೂತ್ ಕಾಂಗ್ರೆಸ್ ಬುಧವಾರ ಕಣ್ಣೂರಿನಲ್ಲಿ ಕಾರ್ಯಕ್ರಮವನ್ನು ನಡೆಸಬಹುದು ಎಂದು ಮೂಲಗಳು ತಿಳಿಸಿವೆ. ಇಲ್ಲದಿದ್ದಲ್ಲಿ ಮತ್ತೆ ಕಾಂಗ್ರೆಸ್ ಪರ ಗುಂಪು ಆತಿಥ್ಯ ವಹಿಸುವ ಸಾಧ್ಯತೆ ಇದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ತರೂರ್ ಯುವ ಕಾಂಗ್ರೆಸ್‌ನ ಭಾಗವಹಿಸುವಿಕೆಯ ಚಿತ್ರ ಎಂದು ಫೋಟೊ ಟ್ವೀಟ್ ಮಾಡಿದ್ದು ನನಗೆ ವೇದಿಕೆಯನ್ನು ನೀಡದಂತೆ ಕೆಲವರು ಒತ್ತಡಕ್ಕೆ ಒಳಗಾದ ನಂತರ ಕೋಝಿಕ್ಕೋಡ್‌ನಲ್ಲಿ @iyc ಕಾರ್ಯಕರ್ತರು ಅದ್ಭುತವಾದ ಸ್ವಾಗತವನ್ನು ನೀಡಿದ್ದಾರೆ ಎಂದು ಬರೆದಿದ್ದಾರೆ.
— Shashi Tharoor (@ShashiTharoor) November 22, 2022
ತರೂರ್ ಅವರ ಮೊದಲ ದೊಡ್ಡ ರಾಜಕೀಯ ಪ್ರವಾಸ ಇದಾಗಿದೆ. ಮಲಬಾರ್ ಪ್ರದೇಶ ಎಂದೂ ಕರೆಯಲ್ಪಡುವ ಉತ್ತರ ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಕೇರಳದಲ್ಲಿ ತಮ್ಮ ಪಕ್ಷದ ಅತಿದೊಡ್ಡ ಮಿತ್ರ ಪಕ್ಷವಾದ ಮುಸ್ಲಿಂ ಲೀಗ್ ನೇತಾರರನ್ನು ಭೇಟಿಯಾಗಿದ್ದಾರೆ.ತರೂರ್ ಈ ರೀತಿ ಭೇಟಿಯಾಗಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನಂತರ ಶಶಿ ತರೂರ್‌ಗೆ ಇದು ನಿರ್ಣಾಯಕ ಸಮಯವಾಗಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ತರೂರ್ ಗೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಕೇರಳದಿಂದ ಹೆಚ್ಚಿನ ಮತಗಳು ಬಂದವು.
Called on Syed SadiqAli Shihab Thangal, President of @iumlofficial Kerala, as well as his family& colleagues. They have been staunch allies of @INCIndia for decades &remain committed to secular politics. Their recent “SauhrdaSangams” brought together all faiths. pic.twitter.com/UsoBwoptSA
— Shashi Tharoor (@ShashiTharoor) November 22, 2022
ಕೇರಳ ರಾಜಕೀಯದಲ್ಲಿ ತರೂರ್‌ಗೆ ಹೆಚ್ಚಿನ ಪಾತ್ರ ನೀಡುವುದನ್ನು ಮುಸ್ಲಿಂ ಲೀಗ್ ಬೆಂಬಲಿಸುತ್ತದೆ, ಆದರೂ ಮುಸ್ಲಿಂ ಲೀಗ್ ಸಾರ್ವಜನಿಕವಾಗಿ ತಮ್ಮ ಮಿತ್ರ ಪಕ್ಷದ ಬಗ್ಗೆ ಜಾಗರೂಕತೆಯಿಂದ ಮಾತನಾಡುತ್ತಿದ್ದು ಇದು ಕಾಂಗ್ರೆಸ್‌ನ ಆಂತರಿಕ ವಿಷಯ ಎಂದಷ್ಟೇ ಹೇಳುತ್ತದೆ.
ಕಾಂಗ್ರೆಸ್‌ನ ಕೇರಳ ಮುಖ್ಯಸ್ಥ ಕೆ ಸುಧಾಕರನ್ ಅವರು ಆರ್‌ಎಸ್‌ಎಸ್ ಪರ ಎಂದು ದೂಷಿಸಿದ ಹೇಳಿಕೆಗಳ ಕುರಿತು ಮಿತ್ರಪಕ್ಷಗಳು ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವಾಗಲೇ ಮುಸ್ಲಿಂ ಲೀಗ್‌ನೊಂದಿಗಿನ ತರೂರ್ ಅವರ ಭೇಟಿ ಬಂದಿದೆ. ಸುಧಾಕರನ್ ನವೆಂಬರ್ 9 ರಂದು ಕಾಂಗ್ರೆಸ್ ಕಾರ್ಯಕರ್ತರು ಆರ್‌ಎಸ್‌ಎಸ್ ಅಥವಾ ಬಿಜೆಪಿಯ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘದ “ಶಾಖಾ” ಗಳಿಗೆ ಎಡ ಕಾರ್ಯಕರ್ತರಿಂದ ರಕ್ಷಣೆ ನೀಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಮುಸ್ಲಿಂ ಲೀಗ್ ಖಂಡಿಸಿದ್ದು, ತದ ನಂತರ ಸುಧಾಕರನ್ ಅದು ಬಾಯ್ತಪ್ಪಿನಿಂದ ಆದ ಪ್ರಮಾದ ಎಂದು ಹೇಳಿದ್ದರು.
ಬುಧವಾರ, ತರೂರ್ ಅವರು ಸುಧಾಕರನ್ ಅವರ ತವರು ಜಿಲ್ಲೆಯ ಕಣ್ಣೂರಿನಲ್ಲಿ ಇರುತ್ತಾರೆ, ತರೂರ್ ಪ್ರವಾಸದ ಬಗ್ಗೆ ಸುಧಾಕರನ್ ಅವರಿಗೆ ಸಮಾಧಾನ ಇಲ್ಲದೇ ಇದ್ದರು, ಸಾರ್ವಜನಿಕ ಟೀಕೆಗಳನ್ನು ಅಥವಾ ಭಿನ್ನಾಭಿಪ್ರಾಯ ಹೊಂದಿರುವ ನಾಯಕರನ್ನು ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗದಂತೆ ತರೂರ್ ಅವರನ್ನು ನಿರ್ಬಂಧಿಸಲಾಗಿದೆ ಎಂಬ ವರದಿಗಳು ಆಧಾರರಹಿತವಾಗಿವೆ ಎಂದು ಸುಧಾಕರನ್ ಹೇಳಿದ್ದು, ತರೂರ್ ಕೂಡ ಅದನ್ನು ನಿರಾಕರಿಸಿದ್ದಾರೆ.
Published On - 4:20 pm, Tue, 22 November 22