ಜಾಕಿರ್ ನಾಯಕ್‌ಗೆ ಕತಾರ್ ಆಹ್ವಾನ; ಫಿಫಾ ವಿಶ್ವಕಪ್ ಬಹಿಷ್ಕಾರಕ್ಕೆ ಬಿಜೆಪಿ ನಾಯಕ ಕರೆ
ಜಗತ್ತೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನಾಯಕ್‌ಗೆ ವೇದಿಕೆ ನೀಡುವುದು ದ್ವೇಷವನ್ನು ಹರಡಲು ಭಯೋತ್ಪಾದಕ ಸಹಾನುಭೂತಿಯನ್ನು ನೀಡಿದಂತಾಗುತ್ತದೆ ಎಂದು ರಾಡ್ರಿಗಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಪಣಜಿ (ಗೋವಾ): ವಿವಾದಾತ್ಮಕ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್‌ಗೆ (Zakir Naik) ಫಿಫಾ ವಿಶ್ವಕಪ್ (FIFA World Cup 2022) ವೇಳೆ ಧಾರ್ಮಿಕ ಪ್ರವಚನ ನೀಡಲು ಕತಾರ್‌ನಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಸಾವಿಯೊ ರಾಡ್ರಿಗಸ್ (Savio Rodrigues) ಇಂದು ಭಾರತ ಸರ್ಕಾರ, ಭಾರತೀಯ ಫುಟ್‌ಬಾಲ್ ಸಂಸ್ಥೆಗಳು ಮತ್ತು ಆತಿಥೇಯ ರಾಷ್ಟ್ರಕ್ಕೆ ಪ್ರಯಾಣಿಸುವ ಭಾರತೀಯರು ಕ್ರೀಡಾಕೂಟವನ್ನು ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಭಾರತದಿಂದ ಪರಾರಿಯಾಗಿರುವ ಜಾಕಿರ್ ನಾಯಕ್ ನ್ನು ಫಿಫಾ ವಿಶ್ವಕಪ್‌ನಲ್ಲಿ ಇಸ್ಲಾಂ ಧರ್ಮದ ಕುರಿತು ಉಪನ್ಯಾಸ ನೀಡಲು ಕತಾರ್ ಆಹ್ವಾನಿಸಿದೆ ಎಂದು ವರದಿಯಾಗಿದೆ. ಜಗತ್ತೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನಾಯಕ್‌ಗೆ ವೇದಿಕೆ ನೀಡುವುದು ದ್ವೇಷವನ್ನು ಹರಡಲು ಭಯೋತ್ಪಾದಕ ಸಹಾನುಭೂತಿಯನ್ನು ನೀಡಿದಂತಾಗುತ್ತದೆ ಎಂದು ರಾಡ್ರಿಗಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫಿಫಾ ವಿಶ್ವಕಪ್ ಒಂದು ಜಾಗತಿಕ ಕಾರ್ಯಕ್ರಮ. ಪ್ರಪಂಚದಾದ್ಯಂತದ ಜನರು ಈ ಅದ್ಭುತ ಕ್ರೀಡೆಯನ್ನು ವೀಕ್ಷಿಸಲು ಬರುತ್ತಾರೆ. ಲಕ್ಷಾಂತರ ಜನರು ಇದನ್ನು ಟಿವಿ ಮತ್ತು ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಾರೆ. ಜಗತ್ತು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಜಾಕಿರ್ ನಾಯಕ್‌ಗೆ ವೇದಿಕೆಯನ್ನು ನೀಡುವುದು, ಭಯೋತ್ಪಾದಕನಿಗೆ ತನ್ನ ಮೂಲಭೂತವಾದ ಮತ್ತು ದ್ವೇಷವನ್ನು ಹರಡಲು ವೇದಿಕೆಯನ್ನು ನೀಡುವುದಾಗಿದೆ ಎಂದು ಅವರು ಹೇಳಿದರು.
ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಒಗ್ಗಟ್ಟು ಸೂಚಿಸಿ ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರು ದೇಶದ ಜನರಿಗೆ ಮತ್ತು ಭಯೋತ್ಪಾದನೆಗೆ ಬಲಿಯಾದ ವಿದೇಶದ ಜನರಿಗೆ ಮನವಿ ಮಾಡಿದರು.
ಭಾರತದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ದ್ವೇಷ ಹರಡುವಲ್ಲಿ ನಾಯಕ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿರುವ ರಾಡ್ರಿಗಸ್, ಆತ ಭಯೋತ್ಪಾದಕನಿಗಿಂತ ಕಡಿಮೆಯಿಲ್ಲ ಎಂದು ಹೇಳಿದರು. ಜಾಕಿರ್ ನಾಯಕ್ ಭಾರತೀಯ ಕಾನೂನಿನಡಿಯಲ್ಲಿ ವಾಟೆಂಡ್ ವ್ಯಕ್ತಿ. ಈತನ ಮೇಲೆ ಹಣ ವರ್ಗಾವಣೆ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಆರೋಪವಿದೆ. ಅವರು ಭಯೋತ್ಪಾದಕ ಸಹಾನುಭೂತಿ ಹೊಂದಿದ್ದಾರೆ. ಅವರು ಸ್ವತಃ ಭಯೋತ್ಪಾದಕನಿಗಿಂತ ಕಡಿಮೆಯಿಲ್ಲ. ಅವರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಮತ್ತು ಭಾರತದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ದ್ವೇಷವನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ರೋಡ್ರಿಗಸ್ ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಗೃಹ ಸಚಿವಾಲಯವು ಜಾಕಿರ್ ನಾಯಕ್ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.
ಬೋಧಕ ಜಾಕಿರ್ ನಾಯಕ್ ವಿಶ್ವಕಪ್ ನಡೆಯುತ್ತಿರುವ ಕತಾರ್‌ನಲ್ಲಿದ್ದಾರೆ. ನಾಯಕ್ ಪಂದ್ಯಾವಳಿಯ ಉದ್ದಕ್ಕೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಕತಾರಿ ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ ಅಲ್ಕಾಸ್‌ನ ನಿರೂಪಕ ಫೈಸಲ್ ಅಲ್ಹಜ್ರಿ ಶನಿವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
Published On - 6:48 pm, Tue, 22 November 22