49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ; ಆಗ ನಡೆದಿದ್ದೇನು?

|

Updated on: Aug 05, 2024 | 9:46 PM

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಬಾಂಗ್ಲಾದಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಇಲ್ಲಿಂದ ಅವರು ಇಂಗ್ಲೆಂಡ್​ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ ಹಾಗೂ ಶೇಖ್ ಹಸೀನಾ ಅವರ ಕುಟುಂಬದ ಸಂಬಂಧ ಇಂದು-ನಿನ್ನೆಯದಲ್ಲ. 1975ರಲ್ಲಿ ಶೇಖ್ ಹಸೀನಾ ಅವರ ಇಡೀ ಕುಟುಂಬವೇ ಕೊಲೆಗೀಡಾದಾಗ ಕೂಡ ಭಾರತ ಶೇಖ್ ಹಸೀನಾ ಮತ್ತು ಅವರ ತಂಗಿಗೆ ಆಶ್ರಯ ನೀಡಿ, ಜೀವ ಕಾಪಾಡಿತ್ತು. ಇದೀಗ ಮತ್ತೆ ಅದೇ ಅಕ್ಕ-ತಂಗಿ ಭಾರತಕ್ಕೆ ಬಂದಿಳಿದಿದ್ದಾರೆ.

49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ; ಆಗ ನಡೆದಿದ್ದೇನು?
ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಶೇಖ್ ಹಸೀನಾ
Follow us on

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ರಾಜೀನಾಮೆ ನೀಡಿ ತನ್ನ ಸಹೋದರಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಭಾರತ ಹಾಗೂ ಶೇಖ್ ಹಸೀನಾ ಅವರ ಕುಟುಂಬಕ್ಕೆ ಅರ್ಧ ಶತಮಾನಕ್ಕೂ ಹಿಂದಿನ ನಂಟಿದೆ. ಶೇಖ್ ಹಸೀನಾ ಅವರ ತಂದೆ ಮತ್ತು ಬಾಂಗ್ಲಾದೇಶದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರು ಆಗಿನ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರೊಂದಿಗೆ ಬಹಳ ಆತ್ಮೀಯ ಸಂಬಂಧವನ್ನು ಹೊಂದಿದ್ದರು.

1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ಮಹತ್ವದ ಪಾತ್ರವನ್ನು ವಹಿಸಿದ್ದರು. ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದರು. ಬಳಿಕ ಶೇಖ್ ಹಸೀನಾ ಅವರ ಆಕೆಯ ತಂದೆ ಹಾಗೂ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯಾದ ನಂತರ ಶೇಖ್ ಹಸೀನಾ, ಆಕೆಯ ಪತಿ, ಸಹೋದರಿ ಮತ್ತು ಇಬ್ಬರು ಮಕ್ಕಳಿಗೆ ಭಾರತ ಆಶ್ರಯ ನೀಡಿತ್ತು. ಅವರು 6 ವರ್ಷಗಳ ಕಾಲ ದೆಹಲಿಯ ಲಜಪತ್ ನಗರ ಮತ್ತು ಪಂಡರ ರಸ್ತೆಯಲ್ಲಿ ವಾಸವಾಗಿದ್ದರು.

ಬೃಹತ್ ಪ್ರತಿಭಟನೆಗಳು ಮತ್ತು ಹಿಂಸಾಚಾರದಲ್ಲಿ ಹೆಚ್ಚುತ್ತಿರುವ ಸಾವುಗಳ ನಡುವೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರ ತಮ್ಮ ದೇಶದಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಇಂದು ಮಾತ್ರ ಅವರು ಇಲ್ಲಿ ತಂಗಲಿದ್ದು, ನಾಳೆ ಇಂಗ್ಲೆಂಡ್​ಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.

49 ವರ್ಷಗಳ ಹಿಂದೆ ನಡೆದಿದ್ದೇನು?:

1975ರಲ್ಲಿ ತನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಸೇರಿದಂತೆ ತನ್ನ ಕುಟುಂಬದ ಹತ್ಯಾಕಾಂಡದ ನಂತರ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದರು. ಶೇಖ್ ಹಸೀನಾ ತನ್ನ ಪತಿ, ಮಕ್ಕಳು ಮತ್ತು ಸಹೋದರಿಯೊಂದಿಗೆ ಭಾರತದಲ್ಲಿ 6 ವರ್ಷ ವಾಸವಾಗಿದ್ದರು. ಅವರು 1975ರಿಂದ 1981ರವರೆಗೆ 6 ವರ್ಷಗಳ ಕಾಲ ದೆಹಲಿಯ ಪಂಡರ ರಸ್ತೆಯಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: Sheikh Hasina: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ಭಾರತಕ್ಕೆ ಪಲಾಯನ

ಆಗಸ್ಟ್ 15, 1975 ರಂದು, ಶೇಖ್ ಹಸೀನಾ ಅವರ ತಂದೆ, ಬಾಂಗ್ಲಾದೇಶದ ಸಂಸ್ಥಾಪಕ, ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಹೊಸದಾಗಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸುಮಾರು 4 ವರ್ಷಗಳ ನಂತರ ಅವರ ಕುಟುಂಬದ 18 ಸದಸ್ಯರೊಂದಿಗೆ ಬರ್ಬರವಾಗಿ ಹತ್ಯೆಗೀಡಾದರು. ಆ ಸಮಯದಲ್ಲಿ ಶೇಖ್ ಹಸೀನಾ ತನ್ನ ಗಂಡ ಹಾಗೂ ತಂಗಿಯ ಜೊತೆ ಜರ್ಮನಿಯಲ್ಲಿ ವಾಸವಾಗಿದ್ದರು. ಹೀಗಾಗಿ, ಅವರ ಕುಟುಂಬದ 18 ಜನರು ಕೊಲೆಯಾದರೂ ಕೂಡ ಶೇಖ್ ಹಸೀನಾ ಮತ್ತು ಅವರ ತಂಗಿ ಮಾತ್ರ ಬದುಕುಳಿದರು.

ಶೇಖ್ ಮುಜಿಬುರ್ ರೆಹಮಾನ್ ಹತ್ಯೆ ಬಾಂಗ್ಲಾದೇಶದಾದ್ಯಂತ ಆತಂಕ ಸೃಷ್ಟಿಸಿತು. ಇದು ದೇಶವನ್ನು ರಾಜಕೀಯ ಪ್ರಕ್ಷುಬ್ಧತೆ ಮತ್ತು ಮಿಲಿಟರಿ ಆಳ್ವಿಕೆಯಲ್ಲಿ ಮುಳುಗಿಸಿತು. ಆಗ ತನ್ನ ಪತಿ ಎಂಎ ವಾಝೆದ್ ಮಿಯಾ ಅವರೊಂದಿಗೆ ಪಶ್ಚಿಮ ಜರ್ಮನಿಯಲ್ಲಿದ್ದ ಶೇಖ್ ಹಸೀನಾ ತನ್ನ ಜೀವ ಉಳಿಸಿಕೊಳ್ಳಲು ಸುರಕ್ಷಿತ ನೆಲೆಗಾಗಿ ಹುಡುಕುತ್ತಿದ್ದರು. ಆಗ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ 1971ರ ವಿಮೋಚನಾ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಭಾರತದಲ್ಲಿ ಆಶ್ರಯ ಪಡೆಯಲು ನಿರ್ಧಾರ ಮಾಡಿದರು.

ಭಾರತದ ಪ್ರಧಾನಿ ಇಂದಿರಾ ಗಾಂಧಿ ಆ ಸಮಯದಲ್ಲಿ ಶೇಖ್ ಹಸೀನಾ ಅವರ ಗಂಡ, ತಂಗಿ, ಮಕ್ಕಳಿಗೆ ಆಶ್ರಯ ನೀಡುವುದಾಗಿ ಸಹಾಯ ಹಸ್ತವನ್ನು ಚಾಚಿತು. 6 ವರ್ಷ ಅವರ ಕುಟುಂಬಕ್ಕೆ ಭದ್ರತೆ ಮತ್ತು ಆಶ್ರಯವನ್ನು ಒದಗಿಸಿತು. ಹೀಗಾಗಿ, ಇಂದಿಗೂ ಶೇಖ್ ಹಸೀನಾ ಮತ್ತು ಗಾಂಧಿ ಕುಟುಂಬದ ನಡುವೆ ಬಹಳ ಆತ್ಮೀಯ ಸಂಬಂಧವಿದೆ.

ಇದನ್ನೂ ಓದಿ: Bangladesh Crisis: ಬಾಂಗ್ಲಾದೇಶದ ಪ್ರಧಾನಿ ಬಂಗಲೆಗೆ ನುಗ್ಗಿ ಶೇಖ್ ಹಸೀನಾ ಸೀರೆ, ಚಿಕನ್, ಸೋಫಾ, ಸೂಟ್​ಕೇಸ್ ಲೂಟಿ ಮಾಡಿದ ಜನರು

ಜರ್ಮನಿಯನ್ನು ತೊರೆದ ನಂತರ, ಶೇಖ್ ಹಸೀನಾ, ತನ್ನ ಇಬ್ಬರು ಚಿಕ್ಕ ಮಕ್ಕಳು, ಗಂಡ ಹಅಗೂ ತಂಗಿಯ ಜೊತೆ ಇಂದಿರಾ ಗಾಂಧಿ ವ್ಯವಸ್ಥೆ ಮಾಡಿದ್ದ ದೆಹಲಿಯ ಸುರಕ್ಷಿತ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಅವರು ತಮ್ಮ ಜೀವ ಭಯದ ಕಾರಣ ಬಿಗಿ ಭದ್ರತೆಯಲ್ಲಿ ವಾಸಿಸುತ್ತಿದ್ದರು. ದೆಹಲಿಯಲ್ಲಿ ಅಜ್ಞಾತವಾಗಿ ವಾಸವಾಗಿದ್ದ ಅವರು 6 ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ತಿಳಿಯಾದ ನಂತರ ತಮ್ಮ ದೇಶಕ್ಕೆ ಮರಳಿದರು.

ಬಾಂಗ್ಲಾದೇಶಕ್ಕೆ ವಾಪಾಸ್ ಹೋದ ನಂತರ ಭ್ರಷ್ಟಾಚಾರದ ಆರೋಪದ ಮೇಲೆ ಜೈಲುವಾಸ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದರೂ ಶೇಖ್ ಹಸೀನಾ ಹಠ ಹಿಡಿದು ಅಂತಿಮವಾಗಿ 1996ರಲ್ಲಿ ಅಧಿಕಾರಕ್ಕೆ ಏರಿದರು. ಆ ವರ್ಷ ಮೊದಲ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾದರು. ಇದೀಗ ಮತ್ತೆ ಶೇಖ್ ಹಸೀನಾ 49 ವರ್ಷಗಳ ಬಳಿಕ ಮತ್ತೆ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ