ಗೋವಾ ವಿಧಾನಸಭೆ ಚುನಾವಣೆ; ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿವೆ ಶಿವಸೇನೆ-ಎನ್​ಸಿಪಿ

| Updated By: Lakshmi Hegde

Updated on: Jan 16, 2022 | 7:58 PM

ಎನ್​ಸಿಪಿ ಹಿರಿಯ ನಾಯಕ ಪ್ರಫುಲ್​ ಪಟೇಲ್​ ನೇತೃತ್ವದಲ್ಲಿ ಜನವರಿ 18ರಂದು ನಡೆಯಲಿರುವ ಪ್ರಮುಖ ಸಭೆಯಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ಎಷ್ಟೆಷ್ಟು ಕ್ಷೇತ್ರಗಳಲ್ಲಿ ಯಾವ ಪಕ್ಷದವರು ಸ್ಪರ್ಧಿಸಬೇಕು ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ.

ಗೋವಾ ವಿಧಾನಸಭೆ ಚುನಾವಣೆ; ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿವೆ ಶಿವಸೇನೆ-ಎನ್​ಸಿಪಿ
ಸಂಜಯ್ ರಾವುತ್
Follow us on

ದೆಹಲಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎನ್​ಸಿಪಿ (ನ್ಯಾಶನಲಿಸ್ಟ್ ಕಾಂಗ್ರೆಸ್​ ಪಾರ್ಟಿ) ಮತ್ತು ಶಿವಸೇನೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ನಿರ್ಧರಿಸಿವೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಇಂದು ಹೇಳಿದ್ದಾರೆ. ಇಂದು ಎಎನ್​ಐ ಜತೆ ಮಾತನಾಡಿದ ಅವರು, ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಶಿವಸೇನೆ-ಎನ್​ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಇನ್ನು ಕ್ಷೇತ್ರ ಹಂಚಿಕೆ ಸಂಬಂಧ ಜನವರಿ 18ರಂದು ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎನ್​ಸಿಪಿ ಹಿರಿಯ ನಾಯಕ ಪ್ರಫುಲ್​ ಪಟೇಲ್​ ನೇತೃತ್ವದಲ್ಲಿ ಜನವರಿ 18ರಂದು ನಡೆಯಲಿರುವ ಪ್ರಮುಖ ಸಭೆಯಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ಎಷ್ಟೆಷ್ಟು ಕ್ಷೇತ್ರಗಳಲ್ಲಿ ಯಾವ ಪಕ್ಷದವರು ಸ್ಪರ್ಧಿಸಬೇಕು? ಅಭ್ಯರ್ಥಿಗಳ ಆಯ್ಕೆ ಇತರ ವಿಚಾರಗಳ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದೂ ಸಂಜಯ್​ ರಾವತ್ ಮಾಹಿತಿ ನೀಡಿದ್ದಾರೆ.  ಮಹಾರಾಷ್ಟ್ರ ಮತ್ತು ಗೋವಾದಲ್ಲಿ ರಾಜಕೀಯ ಸ್ಥಿತಿಗತಿಗಳು ವಿಭಿನ್ನವಾಗಿವೆ. ಮಹಾರಾಷ್ಟ್ರದಲ್ಲಿ ಎನ್​ಸಿಪಿ, ಶಿವಸೇನೆ, ಕಾಂಗ್ರೆಸ್​ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಗಿದ್ದಾಗ್ಯೂ ಕೂಡ, ಗೋವಾದಲ್ಲಿ ಕಾಂಗ್ರೆಸ್​ ಯಾವುದೇ ಪಕ್ಷಗಳೊಟ್ಟಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ ಎಂದೂ ತಿಳಿಸಿದರು.

ಇನ್ನು ಗೋವಾದಲ್ಲಿ ದೆಹಲಿ ಮುಖ್ಯಮಂತ್ರಿ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕೊರೊನಾ ಹೆಚ್ಚುತ್ತಿದೆ. ಇನ್ನಿತರ ಸಮಸ್ಯೆಗಳೂ ತಾಂಡವವಾಡುತ್ತಿವೆ. ಅವರು ತಮ್ಮದೇ ರಾಜ್ಯದ ಸಮಸ್ಯೆಗಳನ್ನು ಗಮನಿಸದೆ ಹೀಗೆ ಗೋವಾದಲ್ಲಿ ಇಷ್ಟು ಪ್ರಚಾರ ನಡೆಸುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಗೋರಖ್​ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳಿಗೆ ಸಂಜಯ್​ ರಾವತ್​ ಹೆಚ್ಚೇನೂ ಉತ್ತರ ಕೊಡಲಿಲ್ಲ. ಯೋಗಿಜಿ ನಿರ್ಧಾರದ ಬಗ್ಗೆ ನಾನು ಯಾವುದೇ ಕಾಮೆಂಟ್ ಕೊಡುವುದಿಲ್ಲ. ಅವರ ಸ್ವಕ್ಷೇತ್ರ ಗೋರಖ್​ಪುರದಿಂದಲೇ ಸ್ಪರ್ಧೆಗೆ ಇಳಿದಿದ್ದು ಒಳ್ಳೆಯದು ಎಂದಿದ್ದಾರೆ.  ಈ ಹಿಂದೆ ಗೋವಾದಲ್ಲಿ ಕಾಂಗ್ರೆಸ್​ ಅಥವಾ ಟಿಎಂಸಿ ಜತೆ ಮೈತ್ರಿ ಮಾಡಿಕೊಳ್ಳುವ ಮಾತುಗಳನ್ನು ಎನ್​ಸಿಪಿ ನಾಯಕ ಶರದ್​ ಪವಾರ್​ ಹೇಳಿದ್ದರು. ಅಂದಹಾಗೆ ಗೋವಾ ವಿಧಾನಸಭೆ ಚುನಾವಣೆ ಫೆ.14ರಂದು ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆ ಇದೆ.

ಇದನ್ನೂ ಓದಿ: ‘ಸುಲ್ಲಿ ಡೀಲ್ಸ್’ ಆಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ