
ಮುಂಬೈ, ನವೆಂಬರ್ 25: ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆ (ಶಿಂಧೆ ಬಣ) ನಾಯಕ ಸಂಜಯ್ ಶಿರ್ಸಾಟ್ 25 ಕೋಟಿ ರೂ. ಮೊತ್ತದ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಸಚಿವ ಸಂಜಯ್ ಶಿರ್ಸಾಟ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದೊಂದು ಆಧಾರರಹಿತ ಮತ್ತು ಬ್ಲ್ಯಾಕ್‌ಮೇಲ್ ತಂತ್ರ ಎಂದು ತಿರುಗೇಟು ನೀಡಿದ್ದಾರೆ.
ಸಂಜಯ್ ರಾವತ್ ಇಂದು ಛತ್ರಪತಿ ಸಂಭಾಜಿನಗರದಲ್ಲಿ ದೂರುದಾರ ಹಾಗೂ ಲಾತೂರ್ ಜಿಲ್ಲೆಯ ಉದ್ಗೀರ್ ಮೂಲದ ಸಾಮಾಜಿಕ ಕಾರ್ಯಕರ್ತ ನರಸಿಂಗ್ ಉದ್ಗೀರ್ಕರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಪ ಮಾಡಿದ್ದಾರೆ. ಉದ್ಗೀರ್‌ನಲ್ಲಿ ದಲಿತ ಮತ್ತು ಮಾತಂಗ್ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ‘ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ತರಬೇತಿ ಕೇಂದ್ರ’ ಸ್ಥಾಪಿಸಲು ‘ಆರತಿ ಸೇವಾಭಾವಿ ಸಂಸ್ಥೆ’ ವತಿಯಿಂದ 25 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿತ್ತು ಎಂದು ಸಂಜಯ್ ರಾವತ್ ವಿವರಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ರಾಮರಾವ್ ವಡ್ಕುಟೆ ನಿಧನ
ಈ ಪ್ರಸ್ತಾವನೆ ಸಲ್ಲಿಸಿದ ಬಳಿಕ, ಸಚಿವ ಶಿರ್ಸಾಟ್ ಅವರು ಮುಂಬೈನ ಕಟ್ಟಡವೊಂದರ 72ನೇ ಮಹಡಿಯಲ್ಲಿರುವ ತಮ್ಮ ಖಾಸಗಿ ನಿವಾಸಕ್ಕೆ ರಾತ್ರಿ ವೇಳೆ ಕರೆಸಿಕೊಂಡು, ಯೋಜನೆಯ ಶೇ. 20ರಷ್ಟು ಅಂದರೆ 5 ಕೋಟಿ ಲಂಚ ನೀಡಿದರೆ ಮಾತ್ರ ಕಡತಕ್ಕೆ ಸಹಿ ಹಾಕುವುದಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಜಯ್ ರಾವತ್ ಆರೋಪಿಸಿದ್ದು, ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸಚಿವ ಸಂಜಯ್ ಶಿರ್ಸಾಟ್ ಹೇಳಿದ್ದೇನು?:
ಸಂಜಯ್ ರಾವತ್ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಸಂಜಯ್ ಶಿರ್ಸಾಟ್, “ಇವೆಲ್ಲವೂ ಸಂಪೂರ್ಣ ಆಧಾರರಹಿತ ಆರೋಪಗಳು. ದೂರುದಾರ ನರಸಿಂಗ್ ಉದ್ಗೀರ್ಕರ್ ಒಬ್ಬ ಬ್ಲ್ಯಾಕ್‌ಮೇಲರ್ ಆಗಿದ್ದು, ಆತನ ವಿರುದ್ಧವೇ ಹಲವಾರು ದೂರುಗಳಿವೆ” ಎಂದು ಹೇಳಿದ್ದಾರೆ. ಅಲ್ಲದೆ, ಸಚಿವರಾಗಿ ತಮಗೆ ಕೇವಲ 10 ಕೋಟಿ ರೂ.ವರೆಗಿನ ಕಡತಗಳಿಗೆ ಮಾತ್ರ ಅನುಮೋದನೆ ನೀಡುವ ಅಧಿಕಾರವಿದ್ದು, 25 ಕೋಟಿಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳು ಮುಖ್ಯಮಂತ್ರಿಗಳ ಅನುಮೋದನೆಗೆ ಹೋಗುತ್ತವೆ ಎಂದಿದ್ದಾರೆ. ಆರೋಪಗಳ ಕುರಿತು ಸಾಕ್ಷ್ಯಾಧಾರಗಳಿದ್ದರೆ ಬಹಿರಂಗಪಡಿಸುವಂತೆ ಅವರು ಸಂಜಯ್ ರಾವತ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ