ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಮಾಡಿರುವ ಟ್ವೀಟ್ವೊಂದು ಈಗ ಕುತೂಹಲಕ್ಕೆ ಕಾರಣವಾಗಿದೆ. ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಸಿಂಗ್ ಯಾದವ್ ಮಧ್ಯೆ ಏನೂ ಸರಿಯಿಲ್ಲ. ಇಬ್ಬರೂ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಅದಕ್ಕಿಂತ ಹೆಚ್ಚಾಗಿ ಶಿವಪಾಲ್ ಸಿಂಗ್ ಯಾದವ್, ತಮ್ಮ ಸೋದರನ ಪುತ್ರ ಅಖಿಲೇಶ್ ಯಾದವ್ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ವರದಿ ಸಾಲುಸಾಲಾಗಿ ಬರುತ್ತಿರುವ ಬೆನ್ನಲ್ಲೇ, ಅವರು ಈ ಟ್ವೀಟ್ ಮಾಡಿದ್ದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸ್ವಾಭಿಮಾನಕ್ಕೆ ಧಕ್ಕೆ ತರುವ ಅದೆಷ್ಟೋ ಘಟನೆಗಳು ನಡೆದರೂ ನಾನು ರಾಜಿಯಾಗುತ್ತಲೇ ಬಂದೆ. ಆದರೆ ಅದಕ್ಕೆ ಪ್ರತಿಯಾಗಿ ನನಗೆ ಸಿಕ್ಕಿದ್ದು ಕೇವಲ ನೋವು ಮಾತ್ರ ಎಂದು ಅವರು ಹೇಳಿದ್ದಾರೆ. ಹಾಗಂತ ಇಲ್ಲಿ ಯಾರ ಹೆಸರನ್ನೂ ಹೇಳಿಲ್ಲ. ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷದ ಜತೆ ಉತ್ತರ ಪ್ರದೇಶ ಚುನಾವಣೆಗೂ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಪ್ರಗತಿಶೀಲ ಸಮಾಜವಾದಿ ಪಾರ್ಟಿ-ಲೋಹಿಯಾ (PSPL) ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಬಳಿಕ ತುಂಬ ಅಸಮಾಧಾನಗೊಂಡಿದ್ದಾರೆ. ಪಕ್ಷ ಸೋತ ಬೆನ್ನಲ್ಲೇ ನಡೆಸಲಾದ ಸಭೆಗಳಿಗೂ ಇವರು ಹಾಜರಾಗಿರಲಿಲ್ಲ.
ಟ್ವೀಟ್ ಮಾಡಿರುವ ಶಿವಪಾಲ್ ಸಿಂಗ್ ಯಾದವ್, ನನ್ನ ಆತ್ಮಗೌರವವನ್ನು ಅದೆಷ್ಟೋ ಸಲ ಅಡವಿಟ್ಟು, ಅವರಿಗೆ ಬೇಕಾದಂತೆ ನಡೆದುಕೊಂಡೆ. ಹಾಗಿದ್ದಾಗ್ಯೂ ನಾನೀಗ ಇಷ್ಟು ಸಿಟ್ಟಾಗಿದ್ದೇನೆ ಎಂದರೆ, ಅದೆಷ್ಟರ ಮಟ್ಟಿಗೆ ನನ್ನ ಹೃದಯಕ್ಕೆ ನೋವಾಗಿರಬೇಡ ಎಂದು ಬರೆದುಕೊಂಡಿದ್ದಾರೆ. ಇದು ಅಖಿಲೇಶ್ ಯಾದವ್ರನ್ನು ಉದ್ದೇಶಿಸಿ ಹೇಳಿದ್ದೇ ಎಂಬುದು ರಾಜಕೀಯ ವಲಯದಲ್ಲಿ ಎದ್ದಿರುವ ಚರ್ಚೆ. ಈ ಮುನಿಸು ಶುರುವಾಗಿದ್ದು ವಿಧಾನಸಭೆ ಚುನಾವಣೆ ಮುಗಿದ ಮೇಲೆ. ಅಖಿಲೇಶ್ ಯಾದವ್ ಅವರು ಮಾರ್ಚ್ನಲ್ಲಿ ಒಂದು ಮೀಟಿಂಗ್ ಕರೆದಿದ್ದರು.ಆದರೆ ಅದಕ್ಕೆ ಶಿವಪಾಲ್ರನ್ನು ಆಹ್ವಾನಿಸಿರಲಿಲ್ಲ. ಹಾಗೇ ಮತ್ತೊಂದು ಸಭೆಗೆ ಶಿವಪಾಲ್ ಅವರೇ ಹೋಗಿರಲಿಲ್ಲ. ಅದಾದ ಬಳಿಕ ಶಿವಪಾಲ್ ಸಿಂಗ್ ಯಾದವ್ ಪದೇಪದೆ ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಳ್ಳಲು ಶುರುವಾಗಿದ್ದಾರೆ. ಇನ್ನು ಈ ಬಗ್ಗೆ ಸೂಕ್ಷ್ಮವಾಗಿಯೇ ತಿರುಗೇಟು ಕೊಟ್ಟಿರುವ ಅಖಿಲೇಶ್ ಯಾದವ್, ಬಿಜೆಪಿಗೆ ಹತ್ತಿರ ಆಗುವವರಿಗೆ ನಮ್ಮ ಪಕ್ಷದಲ್ಲಿ ಸ್ಥಾನವಿಲ್ಲ ಎಂದಿದ್ದಾರೆ. (Source)
ಇದನ್ನೂ ಓದಿ: ರಂಜಾನ್ ಮುನ್ನಾದಿನ ಬೇಡದ ಅತಿಥಿಯೊಬ್ಬ ಮನೆ ಸೇರಿಕೊಂಡ ಪ್ರಸಂಗ ತುಮಕೂರಿನ ಕುಣಿಗಲ್ನಲ್ಲಿ!
Published On - 7:11 pm, Tue, 3 May 22