ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿರುವ ಕುಟುಂಬವೊಂದಕ್ಕೆ ತಿಂಗಳಿಗೆ 3,400 ಕೋಟಿ ರೂ. ವಿದ್ಯುತ್ ಬಿಲ್ (Electricity Bill) ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ವಿದ್ಯುತ್ ಇಲಾಖೆ ನೌಕರನನ್ನು ವಜಾಗೊಳಿಸಲಾಗಿದ್ದು, ಮತ್ತೊಬ್ಬನನ್ನು ಅಮಾನತು ಮಾಡಲಾಗಿದೆ. ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿಯಲ್ಲಿನ ಕುಟುಂಬದ ಮೂವರು ಸದಸ್ಯರು ತಮ್ಮ ವಿದ್ಯುತ್ ಬಿಲ್ ರಶೀದಿ ಪಡೆದ ನಂತರ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಹೇಳಿದ್ದಾರೆ.
ಗ್ವಾಲಿಯರ್‌ನ ಕುಟುಂಬಕ್ಕೆ ಆಕಸ್ಮಿಕವಾಗಿ 1 ತಿಂಗಳಿಗೆ 34,19,53,25,293 ರೂ. ವಿದ್ಯುತ್ ಬಿಲ್ ಬಂದಿದೆ. ಈ ಬಿಲ್ ನೋಡಿ ಆಘಾತಗೊಂಡು ಕುಸಿದುಬಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯಾಂಕಾ ಗುಪ್ತಾ, ಅವರ ತಂದೆ ರಾಜೇಂದ್ರ ಪ್ರಸಾದ್ ಗುಪ್ತಾ ಮತ್ತು ಅವರ ತಾಯಿ ಆಘಾತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿದ್ಯುತ್ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ಪ್ರಿಯಾಂಕಾ ಗುಪ್ತಾ ಅವರ ಅತ್ತೆ ಮತ್ತು ಮಾವನ ರಕ್ತದೊತ್ತಡವೂ ಹೆಚ್ಚಾಗಿದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇನ್ನೆರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಪವರ್ ಕಟ್
ಈ ಕುರಿತು ತ್ವರಿತ ತನಿಖೆಗೆ ಆದೇಶಿಸಿರುವ ಸಚಿವರು, ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ವ್ಯವಸ್ಥೆಯಲ್ಲಿನ ವಿದ್ಯುತ್ ಬಳಕೆಯ ಬದಲು ವಿದ್ಯುತ್ ಗ್ರಾಹಕರ ಸಂಖ್ಯೆಯನ್ನು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಹೊಸ ಬಿಲ್ ನೀಡಲಾಗಿದ್ದು, ಆ ಮನೆಗೆ 1,300 ರೂ. ಕರೆಂಟ್ ಬಿಲ್ ಬಂದಿದೆ. ಈ ರೀತಿಯ ಎಡವಟ್ಟು ಮಾಡಿದ ಒಬ್ಬ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಇನ್ನೊಬ್ಬರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟ ಜೂನಿಯರ್ ಇಂಜಿನಿಯರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತೋಮರ್ ತಿಳಿಸಿದ್ದಾರೆ.