
ನವದೆಹಲಿ, ಆಗಸ್ಟ್ 6: ಮರ್ಚೆಂಟ್ ನೌಕಾ ಅಧಿಕಾರಿಯೊಂದಿಗಿನ ವಿವಾಹವಾದ ಕೇವಲ 6 ತಿಂಗಳ ನಂತರ ಕಳೆದ ಭಾನುವಾರ ರಾತ್ರಿ ಲಕ್ನೋದ (Lucknow) ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ತನ್ನದೇ ಮನೆಯಲ್ಲಿ 26 ವರ್ಷದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮಧು ಸಿಂಗ್ ಎಂಬ ಮಹಿಳೆ ಓಮ್ಯಾಕ್ಸ್ ವಾಟರ್‌ಸ್ಕೇಪ್ಸ್ ಸಂಕೀರ್ಣದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ಪತಿ ಅನುರಾಗ್ ಸಿಂಗ್ ಇತ್ತೀಚೆಗೆ ಸುಮಾರು 10 ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಮರಳಿದ್ದರು. ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ದಂಪತಿಯ ನಡುವೆ ಜಗಳ ನಡೆದಿದ್ದು, ನಂತರ ಮಧು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಆ ಮಹಿಳೆಯ ಕುಟುಂಬದವರು ನನ್ನ ಮಗಳ ಮೇಲೆ ಕಿರುಕುಳ ನಡೆಸಿದ್ದಾರೆ. ಅನುರಾಗ್ ಸಿಂಗ್ ಮಧುವನ್ನು ಕೊಂದು ಆತ್ಮಹತ್ಯೆ ಎಂದು ಚಿತ್ರೀಕರಿಸಿದ್ದಾರೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಬಾಲಕನ ಕಿಡ್ನ್ಯಾಪ್-ಕೊಲೆ ಕೇಸ್: ಕೊನೆಗೂ ರಿವೀಲ್ ಆಯ್ತು ಹತ್ಯೆ ರಹಸ್ಯ!
“ನನ್ನ ಮಗಳನ್ನು ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಲಾಗಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಅನುರಾಗ್ ಮನೆಯ ಕೆಲಸದಾಕೆಯ ಸಹಾಯದಿಂದ ಮಧುವಿನ ಮೃತದೇಹವನ್ನು ನೇಣಿನ ಕುಣಿಕೆಯಿಂದ ಹೊರತೆಗೆದ ನಂತರ ಯಾರಿಗೂ ತಿಳಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ ಸೋಮವಾರ ಮಧ್ಯಾಹ್ನದವರೆಗೆ ಅದನ್ನು ರಹಸ್ಯವಾಗಿಡಲಾಗಿತ್ತು ಎಂದು ಆರೋಪಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Wed, 6 August 25