ಪೊಲೀಸರ ದಿಕ್ಕುತಪ್ಪಿಸಿದ ಶಂಕೆ: ಶ್ರದ್ಧಾ ಹಂತಕ ಅಫ್ತಾಬ್​ಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ಸೋಮವಾರ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಪಾಲಿಗ್ರಾಫ್ ಪರೀಕ್ಷೆಗೆ ಆರೋಪಿಯನ್ನು ಒಳಪಡಿಸಲಾಗುತ್ತೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊಲೀಸರ ದಿಕ್ಕುತಪ್ಪಿಸಿದ ಶಂಕೆ: ಶ್ರದ್ಧಾ ಹಂತಕ ಅಫ್ತಾಬ್​ಗೆ ಇಂದು ಪಾಲಿಗ್ರಾಫ್ ಪರೀಕ್ಷೆ
ಅಫ್ತಾಬ್ ಅಮೀನ್ ಪೂನಾವಾಲಾ- ಶ್ರದ್ಧಾ ವಾಕರ್
Updated By: ಆಯೇಷಾ ಬಾನು

Updated on: Nov 28, 2022 | 7:35 AM

ದೆಹಲಿ: ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ನನ್ನು(Shraddha Walker) ಬರ್ಬರವಾಗಿ ಕೊಂದು ಆಕೆಯ ಮೃತ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ವಿಕೃತ ಮೆರೆದಿದ್ದ ಅಫ್ತಾಬ್ ಪೂನಾವಾಲಾಗೆ(Aftab Poonawala) ನ.26ರಂದು ಸಾಕೇತ್ ನ್ಯಾಯಾಲಯ14 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತ್ತು. ಇನ್ನು ಆರೋಪಿ ಅಫ್ತಾಬ್​ ಪೊಲೀಸರ ದಿಕ್ಕುತಪ್ಪಿಸಿದ್ದಾನೆ ಎಂಬ ಶಂಕೆ ಉಂಟಾಗಿದ್ದು ಅತೃಪ್ತಿಕರ ಉತ್ತರಗಳಿಂದಾಗಿ ಇಂದು ಅಂತಿಮ ಪಾಲಿಗ್ರಾಫ್ ಪರೀಕ್ಷೆ(Polygraph) ನಡೆಸಲು ತೀರ್ಮಾನಿಸಲಾಗಿದೆ. ಸೋಮವಾರ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಪಾಲಿಗ್ರಾಫ್ ಪರೀಕ್ಷೆಗೆ ಆರೋಪಿಯನ್ನು ಒಳಪಡಿಸಲಾಗುತ್ತೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆ ವೇಳೆ ಶ್ರದ್ಧಾ ಹತ್ಯೆಗೆ ಸಂಬಂಧಿಸಿ ಇನ್ನೂ ಉತ್ತರಸಿಗದ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಆರೋಪಿಗೆ ಕೇಳಲಾಗುತ್ತದೆ. ಸೋಮವಾರ ಪಾಲಿಗ್ರಾಫ್ ಪರೀಕ್ಷೆ ಮುಗಿದರೆ ಸೋಮವಾರ ಅಥವಾ ಮಂಗಳವಾರ ಪೂನಾವಾಲಾ ಅವರ ನಾರ್ಕೋ ವಿಶ್ಲೇಷಣೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಹಂತಕ ಅಫ್ತಾಬ್​ ಬಾಯ್ಬಿಟ್ಟ ಕ್ರೂರ ಸತ್ಯಕ್ಕೆ ಬೆಚ್ಚಿಬಿದ್ದ ಪೊಲೀಸ್

“ನಾವು ಪಾಲಿಗ್ರಾಫ್ ಪರೀಕ್ಷೆಗಾಗಿ ವಾರಾಂತ್ಯದಲ್ಲಿ ನಮ್ಮ ಲ್ಯಾಬ್ ಅನ್ನು ತೆರೆದಿದ್ದೇವೆ. ಭಾನುವಾರ, ತನಿಖಾ ತಂಡವು ತಿಹಾರ್ ಜೈಲಿನಿಂದ ಅಫ್ತಾಬ್ ಅವರ ಕಸ್ಟಡಿಗೆ ಅನುಮೋದನೆ ಪಡೆದಿದೆ ಎಂದು ಖಚಿತಪಡಿಸಿದೆ ಮತ್ತು ಸೋಮವಾರ ಉಳಿದ ಪಾಲಿಗ್ರಾಫ್ ಪರೀಕ್ಷೆಗಾಗಿ ಅವರನ್ನು ಲ್ಯಾಬ್‌ಗೆ ಕರೆತರಲಿದೆ. ಪಾಲಿಗ್ರಾಫ್ ಪರೀಕ್ಷೆ ಮುಗಿದ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಅವರ ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ ಎಂದು ಎಫ್‌ಎಸ್‌ಎಲ್ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ಹೇಳಿದ್ದಾರೆ.

ಮಂಗಳವಾರ ಸಂಜೆ ಪರೀಕ್ಷೆಯ ಮೊದಲ ಸೆಷನ್ ನಡೆಸಲಾಯಿತು ಎಂದು ಎಫ್ಎಸ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ತಾಬ್ “ಅನಾರೋಗ್ಯಕ್ಕೆ ಒಳಗಾಗಿದ್ದಾರೆ” ಎಂದು ವರದಿಯಾದ ನಂತರ ಬುಧವಾರ ನಡೆಯಬೇಕಿದ್ದ ಪರೀಕ್ಷೆಯ ಎರಡನೇ ಸೆಷನ್​ನನ್ನು ಮುಂದೂಡಲಾಗಿತ್ತು. ಹೀಗಾಗಿ ಎರಡನೇ ಮತ್ತು ಮೂರನೇ ಸೆಷನ್​ ಅನ್ನು ಗುರುವಾರ ಮತ್ತು ಶುಕ್ರವಾರ ನಡೆಸಲಾಯಿತು.

ಈ ಸೆಷನ್​ಗಳಲ್ಲಿ ಅಫ್ತಾಬ್ ಕೃತ್ಯಕ್ಕೆ ಸಂಬಂಧಿಸದ ಅನೇಕ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಹೀಗಾಗಿ ನಾವು ಬಯಸಿದ ಪ್ರತಿಕ್ರಿಯೆಗಳು ಸಿಕ್ಕಿಲ್ಲ. ಪೊಲೀಸರ ದಿಕ್ಕುತಪ್ಪಿಸುವ ಯತ್ನ ಮಾಡಿದ್ದಾನೆ. ಅಫ್ತಾಬ್ ನಿರಂತರವಾಗಿ ಕೆಮ್ಮುವುದು, ಸೀನುವುದನ್ನು ಮಾಡುತ್ತಿದ್ದ. ಇದರಿಂದಾಗಿ ತನಿಖೆಗೆ ಲೀಡ್ ಸಿಗುತ್ತಿಲ್ಲ. ಹೀಗಾಗಿ ಇಂದು ಅಂತಿಮ ಹಂತದ ಪಾಲಿಗ್ರಾಫ್ ಪರೀಕ್ಷೆ ಮೂಲಕ ಸತ್ಯ ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಫ್‌ಎಸ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:35 am, Mon, 28 November 22