ದೆಹಲಿ: ಶ್ರದ್ಧಾ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಪೂನಾವಾಲಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಸಾಕೇತ್ ನ್ಯಾಯಾಲಯ ಆದೇಶ ನೀಡಿದೆ. ತನ್ನ ಗೆಳತಿ ಶ್ರದ್ಧಾ ವಾಕರ್‌ನನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಹೊತ್ತಿರುವ ಆಫ್ತಾಬ್ ಪೂನ್‌ವಾಲಾನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪಾಲಿಗ್ರಾಫ್ ಪರೀಕ್ಷೆಗೆ ಒಳಗಾದ ಅಫ್ತಾಬ್ ಈಗ ಸೋಮವಾರ ನಾರ್ಕೊ ಪರೀಕ್ಷೆಗೆ ಒಳಗಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
28 ವರ್ಷದ ಶ್ರದ್ಧಾ ಹಾಗೂ ಆಕೆಯ ಪ್ರೇಮಿ ಅಫ್ತಾಬ್ ಒಂದೇ ಮನೆಯಲ್ಲಿ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಅಪ್ಪ-ಅಮ್ಮನ ಮಾತು ಕೇಳದೆ ಅವರೊಂದಿಗೆ ಜಗಳವಾಡಿಕೊಂಡು ಅಫ್ತಾಬ್ ಜೊತೆ ಇರಲು ಬಂದಿದ್ದ ಶ್ರದ್ಧಾಗೆ ತಮ್ಮ ಸಂಬಂಧಕ್ಕೊಂದು ಹೆಸರು ಬೇಕಿತ್ತು. ಹೀಗಾಗಿ, ತನ್ನನ್ನು ಮದುವೆಯಾಗೆಂದು ಶ್ರದ್ಧಾ ಅಫ್ತಾಬ್ ಬಳಿ ಹಠ ಮಾಡುತ್ತಲೇ ಇದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಅಫ್ತಾಬ್ಗೆ ಒಪ್ಪಿಗೆ ಇರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಆಮೇಲೆ ಏನು ಮಾಡುವುದೆಂದು ತೋಚದೆ ಆ ಶವವನ್ನು ಬೆಡ್ರೂಮಿನಲ್ಲಿಟ್ಟುಕೊಂಡು ಕುಳಿತಿದ್ದಾಗ ಆ ಶವವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಬೇಕೆಂಬ ಯೋಚನೆ ಬಂದಿತ್ತು.
ಇದನ್ನು ಓದಿ: ಶ್ರದ್ಧಾ ಕೊಲೆ ಪ್ರಕರಣ; ಹಂತಕ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ
ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. ಇದರಿಂದಾಗಿ ಆ ಶವ ಯಾರದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ ಎಂಬುದು ಅವನ ಪ್ಲಾನ್ ಆಗಿತ್ತು.
18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ.
ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ರದ್ಧಾ ವಾಕರ್ ಹಾಗೂ ಅಫ್ತಾಬ್ ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು. ಅವರು 3 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಮನೆಯವರು ಅದಕ್ಕೆ ಒಪ್ಪದಿದ್ದಾಗ ಅವರಿಬ್ಬರೂ ದೆಹಲಿಗೆ ಬಂದು ಫ್ಲಾಟ್ನಲ್ಲಿ ವಾಸವಾಗಿದ್ದರು. ಆಗ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಅಫ್ತಾಬ್ಗೆ ಒತ್ತಡ ಹೇರಲು ಪ್ರಾರಂಭಿಸಿದಳು. ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.
Published On - 4:15 pm, Sat, 26 November 22