ದಾರಿಗೆ ಅಡ್ಡಬಂದವರನ್ನ ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಎದುರು ಜಗತ್ತೇ ಮಂಡಿ ಊರುವಂಥ ಸ್ಥಿತಿ ಬಂದಿದೆ. ಈ ಮಧ್ಯೆ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವಾರು ದೇಶಗಳು ತಕ್ಕ ಔಷಧದ ಹುಡುಕಾಟದಲ್ಲಿ ತೊಡಗಿದೆ. ಅದರಲ್ಲಿ ಇಂಗ್ಲೆಂಡ್ ಸಹ ಒಂದು.
ಇದೀಗ ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾ ಜೆನೆಕಾ (Astra Zeneca) ಸಹ ಭಾಗಿತ್ವದಲ್ಲಿ ತಯಾರಾಗಿರುವ ಕೊವಿಡ್ ಲಸಿಕೆ ಮಾನವ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನ ನೀಡುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಜನರಲ್ಲಿ ಕೊಂಚ ಭರವಸೆ ಮೂಡಿದೆ. ಇದೀಗ ಭಾರತದ ಪ್ರಖ್ಯಾತ ಲಸಿಕೆ ತಯಾರಿಕಾ ಕಂಪನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute of India) ಮುಖ್ಯಸ್ಥ ಅದಾರ್ ಪೂನಾವಾಲಾ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
‘ಪ್ರತಿ ಲಸಿಕೆಯ ಬೆಲೆ 1 ಸಾವಿರ ರೂಪಾಯಿ’
ಹೌದು, ಅದಾರ್ ಪೂನಾವಾಲಾ ಡಿಸೆಂಬರ್ ಒಳಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ನ ಕನಿಷ್ಠ 30 ಕೋಟಿ ಲಸಿಕೆಗಳನ್ನು ತಯಾರಿಸುವುದಾಗಿ ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್ (Covishield) ಎಂಬ ಹೆಸರಿನಲ್ಲಿ ಈ ಲಸಿಕೆ ತಯಾರಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಭಾರತದಲ್ಲಿ ಪ್ರತಿ ಲಸಿಕೆಯು 1,000 ರೂಪಾಯಿ ದರದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಸಹ ನೀಡಿದ್ದಾರೆ.
ಈ ಆಕ್ಸ್ಫರ್ಡ್ ಲಸಿಕೆ ಎಲ್ಲಾ ಮಾನವ ಪ್ರಯೋಗಿಕ ಹಂತದಲ್ಲಿ ಪೂರ್ಣಪ್ರಮಾಣವಾಗಿ ಯಶಸ್ಸನ್ನು ಕಂಡ ಕೂಡಲೇ ಅದನ್ನು ತಯಾರಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನ ಆಸ್ಟ್ರಾ ಜೆನೆಕಾ ಆಯ್ಕೆ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರಕ್ಕೆ ದೇಶದಲ್ಲಿ ಇದರ ಮಾನವ ಪ್ರಯೋಗಕ್ಕೆ ಅನುಮತಿ ಪಡೆದು ಭಾರತದಲ್ಲೂ ಇದರ ಟ್ರಯಲ್ ಆರಂಭಿಸುತ್ತೇವೆ ಎಂದು ಅದಾರ್ ಪೂನಾವಾಲಾ ತಿಳಿಸಿದ್ದಾರೆ.
Published On - 5:13 pm, Tue, 21 July 20